ಮೈಸೂರು

ಡಿ ಬನುಮಯ್ಯನವರ 160ನೇ ಜಯಂತ್ಯೋತ್ಸವದ ಅಂಗವಾಗಿ  ಬನುಮಯ್ಯ ನೆನಪು  ಕಾರ್ಯಕ್ರಮ

ಮೈಸೂರು,ಜು.4:- ಸತ್ಯಮೇವ ಜಯತೆ ಸಂಘಟನೆ ಹಾಗೂ ಡಿ  ಬನುಮಯ್ಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ರಾವ್ ಬಹದ್ದೂರ್ ಧರ್ಮಪ್ರಕಾಶ ಡಿ ಬನುಮಯ್ಯನವರ 160ನೇ ಜಯಂತ್ಯೋತ್ಸವದ ಅಂಗವಾಗಿ  ಬನುಮಯ್ಯ ನೆನಪು  ಕಾರ್ಯಕ್ರಮವನ್ನು ಇಂದು ಸಯ್ಯಾಜಿರಾವ್ ರಸ್ತೆಯಲ್ಲಿರುವ ಡಿ ಬನುಮಯ್ಯ ಕಾಲೇಜು ಆವರಣದಲ್ಲಿ ಡಿ ಬನುಮಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖೇನ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ಮಾಲಾರ್ಪಣೆ ಮಾಡಿ ಮಾತನಾಡಿದ  ಬಿ ಬನುಮಯ್ಯ ಅವರ ಮೊಮ್ಮಗ ಜಯದೇವ್    ನಮ್ಮ ತಾತ ಬನುಮಯ್ಯನವರು  ಹೆಚ್ಚು ಓದಿಲ್ಲದಿದ್ದರೂ ಓದಿನ ಮಹತ್ವವನ್ನು ,ಅಗತ್ಯವನ್ನು ಚೆನ್ನಾಗಿ  ಅರಿತಿದ್ದರು.  ದೀನ, ದಲಿತ ,ಬಡ, ಮಧ್ಯಮ ವರ್ಗದವರು ಈಗ ಆರ್ಥಿಕವಾಗಿ ಕೆಳ ಮಟ್ಟದಲ್ಲಿರುವವರಿಗೆ ಜಾತಿ ಮತ ತಾರತಮ್ಯವಿಲ್ಲದೆ ಸುಲಭವಾಗಿ ಶಿಕ್ಷಣ  ದೊರೆಯಬೇಕೆಂಬುದು ಅವರ ಆಶಯವಾಗಿತ್ತು . ಆದ್ದರಿಂದಲೇ ಅವರು ಹಲವು ಶಾಲಾ ಕಾಲೇಜುಗಳನ್ನು ಮೈಸೂರು ನಗರದಲ್ಲಿ ಸ್ಥಾಪನೆ ಮಾಡಿ ,ಅವರು ತಮ್ಮ ಜೀವನದಲ್ಲಿ ದುಡಿದ ಹಣವನ್ನೆಲ್ಲ ಶಾಲೆ ಕಾಲೇಜುಗಳ ಸ್ಥಾಪನೆಗೆ ಮತ್ತು ಆ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದವರ ಸಹಾಯಕ್ಕೆ ವಿನಿಯೋಗಿಸುತ್ತಿದ್ದರು. ಇವರ ಸೇವೆಯನ್ನು ನೋಡಿ ಮೆಚ್ಚಿ ಅಂದಿನ ಮೈಸೂರು ಮಹಾರಾಜರು ಇವರಿಗೆ ಧರ್ಮ ಪ್ರಕಾಶ ಎಂಬ ಬಿರುದನ್ನು ಕೊಟ್ಟು  ಸನ್ಮಾನಿಸಿದರು ಎಂದು ಸ್ಮರಿಸಿದರು .

ಮಾಜಿ ನಗರ ಪಾಲಿಕೆ ಸದಸ್ಯ  ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ   ಎಂ ಕೆ ಅಶೋಕ್  ಮಾತನಾಡಿ ಬನುಮಯ್ಯ ಅವರು ದೂರದೃಷ್ಟಿ ಇಟ್ಟುಕೊಂಡು ವಿದ್ಯಾಸಂಸ್ಥೆ ಆರಂಭಿಸಿದರು. ಅವರಿಗೆ ಶಿಕ್ಷಣ ಇಲ್ಲದಿದ್ದರೂ ಕುಂಚಿಟಿಗರು ಹಾಗೂ ಹಿಂದುಳಿದವರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗದೆ  ಶಿಕ್ಷಣ ಸಿಗಬೇಕು. ವಿದ್ಯಾವಂತರಾಗಬೇಕು, ಬುದ್ಧಿವಂತರಾಗಬೇಕು.  ಆ ಮೂಲಕ ಸ್ವಾಭಿಮಾನಿ ಬದುಕು ಸಿಗಬೇಕು ಎನ್ನುವ ಉನ್ನತ ವಿಚಾರವನ್ನು ಅವರು  ಹೊಂದಿದ್ದರು’

‘ಮೈಸೂರಿನ ಸಂತೆಪೇಟೆಯಲ್ಲಿ ಕೂಲಿ ಮಾಡುತ್ತ, ಕಷ್ಟಪಟ್ಟು ದುಡಿದು ಆರ್ಥಿಕವಾಗಿ ಮೇಲೆ ಬಂದವರು ಬನುಮಯ್ಯ. ಗಳಿಸಿದ್ದನ್ನು ಸಮಾಜಕ್ಕೆ ಖರ್ಚು ಮಾಡುವವರು ಕಡಿಮೆ.  ಕುಟುಂಬಕ್ಕೆ, ತಲತಲಾಂತರಕ್ಕೆ ಇರಲಿ ಎನ್ನುವವರೇ ಹೆಚ್ಚು. ಆದರೆ, ಬನುಮಯ್ಯ ಅವರು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದರ ಜತೆಗೆ ಎಂ.ಎನ್‌. ಜೋಯಿಸ್, ತಗಡೂರು ರಾಮಚಂದ್ರರಾಯರು, ಅರಗಂ ರಂಗರಾಯರು ಮೊದಲಾದ ಸ್ವಾತಂತ್ರ್ಯ ಹೋರಾಟಗಾರರನ್ನು ಬೆಂಬಲಿಸಿದರು.

ಬನುಮಯ್ಯನವರು ಸಮಾಜಕ್ಕೆ ಮಾಡಿದ ತ್ಯಾಗ ದೊಡ್ಡದು. ಸ್ವಂತ ಜಮೀನನ್ನು ಮಾರಿ ಮೈಸೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ಬಡ ಹಾಗೂ ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಅಂದಿನ ಕಾಲದಲ್ಲಿಯೇ ಶಿಕ್ಷಣ ನೀಡಿದವರು. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತಿದೆ. ಇಂಥ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ’ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಒಡನಾಡಿಯಾಗಿದ್ದ ಬನುಮಯ್ಯನವರು ಮಹಾರಾಜ ಸಲಹೆಯಂತೆ ಸಮಾಜದ ಒಳಿತಿಗೆ ಅವಿರತವಾಗಿ ಶ್ರಮಿಸಿದವರು. ಸಂಪಾದಿಸಿದ ಹಣವನ್ನು ಸ್ವಂತಕ್ಕೆ ಇಟ್ಟುಕೊಳ್ಳದೇ, ಸಮಾಜಕ್ಕೆ ದಾನ ಮಾಡಿದರು. ಅಂದಿನ ಕಾಲದಲ್ಲಿ ಬಡವರಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಈ ಕೊರತೆಯನ್ನು ನೀಗಿಸಲು ಶಿಕ್ಷಣ ಸಂಸ್ಥೆ ಕಟ್ಟಿದರು. ಇದರಿಂದ, ಬಹಳ ಅನುಕೂಲವಾಗಿದೆ  ಎಂದು ಶ್ಲಾಘಿಸಿದರು.

ಸತ್ಯಮೇವ ಜಯತೇ ಸಂಘಟನೆಯ ಅಧ್ಯಕ್ಷರಾದ ರಾಕೇಶ್ ಕುಂಚಿಟಿಗ ಮಾತನಾಡಿ  ಬನುಮಯ್ಯ ಅವರು ಮೈಸೂರಲ್ಲಿ ಮೊದಲು ಸ್ಥಾಪನೆ ಮಾಡಿದ್ದು ಒಂದು ಪ್ರಾಥಮಿಕ ಶಾಲೆ. ನಂತರ ಅದು ಹೈಸ್ಕೂಲ್ ಆಗಿ ನಂತರ ತದನಂತರ ಕಾಲೇಜ್ ಆಗಿ ಪರಿವರ್ತನೆಗೊಂಡಿತು.  ಅದುವೇ ಇಂದಿನ ಡಿ ಬನುಮಯ್ಯ ಕಾಲೇಜು, ಭಾರತೀಯ ಸಂಸ್ಕೃತಿಯ ಪರಂಪರೆಯ ಪ್ರತೀಕವಾಗಿ ಭಾರತ ಸರ್ಕಾರ ಗುರುತಿಸಿರುವ ಕೆಲವೇ ಕೆಲವು ಭವ್ಯವಾದ ಕಟ್ಟಡಗಳಲ್ಲಿ (Heritage buildings in India ) ಈ ಕಾಲೇಜು ಕಟ್ಟಡವು ಒಂದಾಗಿರುವುದು ಮತ್ತೊಂದು ವಿಶೇಷ.  ಇಂತಹ ಮಹಾನ್ ವ್ಯಕ್ತಿ ನಮ್ಮ ರಾಜ್ಯದವರು ನಮ್ಮ ಹೆಮ್ಮೆ ಅವರು ಬರೀ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ ಇಂದಿನ ಪೀಳಿಗೆಗೆ ಒಂದು ಪ್ರೇರಣೆ. ಮುಂದಿನ ಪೀಳಿಗೆಗೆ ಒಂದು ಸಂದೇಶ ಧರ್ಮ ಸಿದ್ಧಾಂತ ಎಂದು ಕಿತ್ತಾಡುವ ಜನರು ಇಂತಹ ಮಹಾನ್ ವ್ಯಕ್ತಿಯನ್ನು ನೋಡಿ ಕಲಿಯಬೇಕಾಗಿದೆ. ಈ ವಿದ್ಯಾಸಂಸ್ಥೆ ಮೈಸೂರು ನಗರ ಜಿಲ್ಲೆ ಅಲ್ಲದೆ ಇಡೀ ಕರ್ನಾಟಕದಲ್ಲಿ ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿದ್ದು ಈ ಕಾಲೇಜಿನಲ್ಲಿ ಓದಿದ ಏಳು ಜನ ವಿದ್ಯಾರ್ಥಿಗಳು ಮೈಸೂರು ನಗರದ ಮೇಯರ್ ಆಗಿದ್ದರೆ, ಹಾಗೆಯೇ 1989 ರಲ್ಲಿ  ಕರ್ನಾಟಕದಿಂದ ಪ್ರಥಮ ಬಾರಿಗೆ ಸುಪ್ರೀಂಕೋರ್ಟ್ ಪ್ರಧಾನ ನ್ಯಾಯಮೂರ್ತಿಯಾಗಿ ಆಯ್ಕೆಯಾದವರು ಎಂದು ಸ್ಮರಿಸಿದರು.

ಈ ಸಂದರ್ಭ  ಕುಂಚಿಟಿಗರ ಸಂಘದ ನಿರ್ದೇಶಕರಾದ  ಎಂಕೆ ರವೀಶ್ ,ದೀಪಕ್  ಹಾಗೂ ಡಿ ಬನುಮಯ್ಯ ಹಳೆ ವಿದ್ಯಾರ್ಥಿಗಳಾದ ಅಜಯ್ ಶಾಸ್ತ್ರಿ ,ಚಂದ್ರು, ಪುರುಷೋತ್ತಮ್, ಡಿಪೋ ಆನಂದ್, ಧನಪಾಲ್ ಹಾಗೂ ಕಾಲೇಜಿನ ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳು ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: