ಪ್ರಮುಖ ಸುದ್ದಿ

ಮಡಿಕೇರಿ ನಗರಸಭೆ ಆಸ್ತಿ ತೆರಿಗೆ ಗೊಂದಲ : ಚೇಂಬರ್ ಆಫ್ ಕಾಮರ್ಸ್ ಜೊತೆ ಚರ್ಚಿಸಿ ನಿರ್ಧಾರ

ರಾಜ್ಯ(ಮಡಿಕೇರಿ) ಜು.4 :- ಮಡಿಕೇರಿ ನಗರಸಭೆಯ ಆಸ್ತಿ ತೆರಿಗೆ ಗೊಂದಲ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ನಗರಸಭೆ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಕರೆದು ಚೇಂಬರ್ ಆಫ್ ಕಾಮರ್ಸ್ ಜೊತೆ ಚರ್ಚಿಸುವುದಾಗಿ ಮಡಿಕೇರಿ ನಗರಸಭಾ ಆಯುಕ್ತರಾದ ಶ್ರೀನಿವಾಸ್ ಅವರು ತಿಳಿಸಿದ್ದಾರೆ.
2020- 21 ನೇ ಸಾಲಿನಲ್ಲಿ ಮಡಿಕೇರಿ ನಗರಸಭೆಯ ಆಸ್ತಿ ತೆರಿಗೆ ವಿಚಾರದಲ್ಲಿ ಹಲವಷ್ಟು ಮಂದಿಗೆ ದುಪ್ಪಟ್ಟು ತೆರಿಗೆ ವಿಧಿಸಿರುವ ಬಗ್ಗೆ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ನಿಯೋಗ ಇಂದು ನಗರ ಸಭಾ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿತು. ಈ ಬಗ್ಗೆ ತೆರಿಗೆದಾರರು ಅನುಭವಿಸುತ್ತಿರುವ ಸಂಕಟದ ಬಗ್ಗೆ ಆಯುಕ್ತರಿಗೆ ಮನವರಿಕೆ ಮಾಡಿಕೊಡಲಾಯಿತು. ಈ ಸಂದರ್ಭ ಮಾತನಾಡಿದ ಆಯುಕ್ತರು ಈ ಬಗ್ಗೆ ಜಿಲ್ಲಾಧಿಕಾರಿ ಅವರು ಕೂಡ ಗಮನ ಹರಿಸಿದ್ದು ಪರಿಶೀಲಿಸುವಂತೆ ತನಗೆ ಸೂಚಿಸಿರುವುದಾಗಿ ನಿಯೋಗಕ್ಕೆ ತಿಳಿಸಿದರು.
ಸರಕಾರದ ನಿಯಮದಂತೆ ಅನಧಿಕೃತ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ, ಹಳೆಯ ಕಟ್ಟಡಗಳಿಗೆ ಇದರಿಂದ ರಿಯಾಯಿತಿ ದೊರಕಿಸಲು ಸಾಧ್ಯವೇ ಎಂಬ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಪತ್ರ ಬರೆದು ಅವರಿಂದ ಮಾಹಿತಿ ಪಡೆಯುವುದಾಗಿ ಈ ಸಂದರ್ಭದಲ್ಲಿ ಆಯುಕ್ತರು ತಿಳಿಸಿದರು. ಅಲ್ಲದೆ ತೆರಿಗೆದಾರರಿಗೆ ನೀಡಬೇಕಾದ ಸವಕಳಿಯ ಕುರಿತು ಕೂಡ ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಮೂಲ ತೆರಿಗೆ ಮೇಲೆ ಮೂರು ವರ್ಷಕ್ಕೊಮ್ಮೆ ಹೆಚ್ಚು ಮಾಡುವ ತೆರಿಗೆ ಮೇಲೆ ಕೂಡ ಮತ್ತೆ ಮೂರು ವರ್ಷದ ಬಳಿಕ ತೆರಿಗೆ ವಸೂಲಿ ಮಾಡುತ್ತಿರುವುದು ಸರಕಾರದ ಕ್ರಮವೇ ಹೊರತು ನಗರಸಭೆಯದ್ದಲ್ಲ, ಈ ಬಗ್ಗೆ ಕೇಂದ್ರ ಕಚೇರಿಯಿಂದ ಮಾಹಿತಿ ಪಡೆಯಲಾಗಿದೆ ಎಂದು ಕೂಡ ಆಯುಕ್ತರು ನಿಯೋಗಕ್ಕೆ ತಿಳಿಸಿದರು.
ಸದ್ಯದಲ್ಲಿಯೇ ನಗರಸಭೆ, ಮೂಡ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಹಾಗೂ ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಜಂಟಿ ಸಭೆ ನಡೆಸಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಆಯುಕ್ತರು ತಿಳಿಸಿದ್ದಾರೆ.
ಈ ಸಂದರ್ಭ ನಗರ ಚೇಂಬರ್ ಅಧ್ಯಕ್ಷ ಧನಂಜಯ್, ಪದಾಧಿಕಾರಿಗಳಾದ ಕಬೀರ್, ರಾಜೇಶ್, ವಿನಾಯಕ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್, ಮಾಜಿ ಅಧ್ಯಕ್ಷ ಜಿ ಚಿದ್ವಿಲಾಸ್ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: