ದೇಶಪ್ರಮುಖ ಸುದ್ದಿ

ಕೇರಳದ ತಿರುವನಂತಪುರದಲ್ಲಿ ಒಂದು ವಾರ ಟ್ರಿಪಲ್ ಲಾಕ್ ಡೌನ್

ತಿರುವನಂತಪುರಂ,ಜು.6-ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗಿರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಟ್ರಿಪಲ್ ಲಾಕ್ ಡೌನ್ (ಹೆಚ್ಚಿನ ನಿರ್ಬಂಧ) ಘೋಷಿಸಿದೆ.

ಸ್ಥಳೀಯ ಸಂಪರ್ಕದಿಂದ ತಿರುವನಂತಪುರದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಸರ್ಕಾರ ಹೆಚ್ಚಿನ ನಿರ್ಬಂಧ ಘೋಷಿಸಿ ಒಂದು ವಾರ ನಗರವನ್ನು ಸಂಪೂರ್ಣ ಬಂದ್ ಮಾಡಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಸಂಜೆ 6 ಗಂಟೆಯಿಂದಲೇ ಟ್ರಿಪಲ್ ಲಾಕ್ ಡೌನ್ ನಗರದಲ್ಲಿ ಜಾರಿಗೆ ಬರಲಿದೆ. ವೈದ್ಯಕೀಯ ತುರ್ತು ಹೊರತುಪಡಿಸಿ ನಗರದ ಜನತೆಯನ್ನು ಇನ್ನೊಂದು ವಾರ ಹೊರಗೆ ಬಿಡಲಾಗುವುದಿಲ್ಲ.

ಸರ್ಕಾರಿ, ಖಾಸಗಿ ಮತ್ತು ಸಚಿವಾಲಯ ಕಚೇರಿಗಳು ತಿರುವನಂತಪುರದಲ್ಲಿ ಇನ್ನೊಂದು ವಾರ ಮುಚ್ಚಿರುತ್ತವೆ. ನಗರದಲ್ಲಿ ನ್ಯಾಯಾಲಯಗಳು ಸಹ ಇನ್ನೊಂದು ವಾರ ಮುಚ್ಚಿರುತ್ತದೆ. ತುರ್ತು ವಿಚಾರಣೆ, ಜಾಮೀನು ಅರ್ಜಿ ಇತ್ಯಾದಿಗಳನ್ನು ಆನ್ ಲೈನ್ ನಲ್ಲಿ ನಡೆಸಲಾಗುತ್ತದೆ.

ನಗರಕ್ಕೆ ತುರ್ತು ಕೆಲಸಗಳಿಗೆ ಬರುವವರಿಗೆ ಮಾತ್ರ ಇನ್ನೊಂದು ವಾರ ಅವಕಾಶವಿದ್ದು ಪುನಃ ಹೊರಗೆ ಹೋಗಲು ಸಾಧ್ಯವಿಲ್ಲ. ಯಾವುದೇ ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಬಿಡುವುದಿಲ್ಲ. ಜನರ ಬೇಡಿಕೆಗಳಿಗನುಗುಣವಾಗಿ ಪೊಲೀಸರೇ ವಸ್ತುಗಳನ್ನು ಜನರ ಮನೆಬಾಗಿಲಿಗೆ ತಂದು ಕೊಡಲಿದ್ದಾರೆ. ಸೇವೆಗಳನ್ನು ಪಡೆಯಲು ಜನರಿಗೆ ಇಂದು ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಅದನ್ನು ಪೊಲೀಸರು ಇಂದು ಸಾಯಂಕಾಲದೊಳಗೆ ತಿಳಿಸಲಿದ್ದಾರೆ. ಔಷಧಿ ಮಳಿಗೆಗಳು, ಆಸ್ಪತ್ರೆಗಳು ಮತ್ತು ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ನಿನ್ನೆ ರಾಜ್ಯದಲ್ಲಿ ವರದಿಯಾದ 38 ಪ್ರಕರಣಗಳಲ್ಲಿ 22 ತಿರುವನಂತಪುರದಲ್ಲೇ ಆಗಿವೆ. ಸ್ಥಳೀಯ ಮಟ್ಟದಲ್ಲಿ ವರದಿಯಾದ 22 ಪ್ರಕರಣಗಳಲ್ಲಿ 14 ಪ್ರಕರಣಗಳಲ್ಲಿ ಸೋಂಕು ಎಲ್ಲಿಂದ ತಗುಲಿತು ಎಂದೇ ಪತ್ತೆಯಾಗಿಲ್ಲ. (ಎಂ.ಎನ್)

 

Leave a Reply

comments

Related Articles

error: