ಮೈಸೂರು

ಸಂಬಂಧಗಳನ್ನು ಬೆಸೆಯುವ ಸಾಮರ್ಥ್ಯ ಜಾನಪದಕ್ಕಿದೆ : ಟಿ.ಈಶ್ವರ್ ಅಭಿಮತ

ಜಾನಪದಕ್ಕೆ ಭವ್ಯ ಭಾರತ ನಿರ್ಮಾಣ ಮಾಡುವ ಶಕ್ತಿ, ಸಂಬಂಧಗಳನ್ನು ಬೆಸೆಯುವ ಸಾಮರ್ಥ್ಯವಿದ್ದು ಜಾನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಅರಣ್ಯ ಕೈಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ್ ನಾಯಕ್ ಅಭಿಪ್ರಾಯಪಟ್ಟರು.

ಸೋಮವಾರ ಮೈಸೂರಿನ ಸಿಪಿಸಿ ಪಾಲಿಟೆಕ್ನಿಟ್ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ಪರಿಷತ್‍ನ ನರಸಿಂಹರಾಜ ಕ್ಷೇತ್ರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜಾನಪದಕ್ಕೆ ದೇಶವನ್ನು ಒಗ್ಗೂಡಿಸುವ ಶಕ್ತಿಯಿದೆ. ದೇಶದ ಗಟ್ಟಿ ಬುನಾದಿಗೆ ಕೊಡುಗೆ ನೀಡುವ ಸಾಮರ್ಥ್ಯವೂ ಇದೆ. ಜಾನಪದದಲ್ಲಿ ಯಾವುದೇ ಜಾತಿ, ಧರ್ಮ, ಮತ ಪಂಥದ ಭೇದಭಾವವಿಲ್ಲ. ಸರ್ವಧರ್ಮದ ಭಾವನೆಯನ್ನು ಜಾನಪದ ಒಳಗೊಂಡಿದೆ. ಯಾವುದೇ ಶುಭ ಸಮಾರಂಭಗಳಿಗೆ, ಸತ್ತಾಗ ಜಾನಪದ ಬೇಕೇ ಬೇಕು. ಜಾನಪದವನ್ನು ಭಾಷಾಂತರ ಮಾಡಲು ಸಾಧ್ಯವಿಲ್ಲ ಎಂದರು.

ಇತ್ತೀಚೆಗೆ ಇಂಗ್ಲಿಷ್ ಗೀಳು ಎಲ್ಲರಲ್ಲೂ ಹೆಚ್ಚಾಗಿರುವುದರಿಂದ ಜಾನಪದ ನಶಿಸಿ ಹೋಗುವ ಆತಂಕ ಎದುರಾಗಿದೆ. ಮಮ್ಮಿ, ಡ್ಯಾಡಿ ಸಂಸ್ಕೃತಿ ಕನ್ನಡಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಜಾನಪದದ ಬುನಾದಿ ತುಂಬಾ ಗಟ್ಟಿಯಾಗಿದ್ದು ಅದನ್ನು ಮತ್ತೆ ಗಟ್ಟಿಗೊಳಿಸುವ ಅಗತ್ಯ ಇಲ್ಲ. ಅದನ್ನು ಪ್ರೋತ್ಸಾಹಿಸಿ, ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಜಾನಪದದಿಂದ ಗಣಿತದ ಆಕಾರಗಳು, ಪರಿಕಲ್ಪನೆಗಳು ಮೂಡಿದ್ದು, ಎಲ್ಲಾ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆ ನೀಡಿದೆ. ದೇಶವನ್ನು, ನಮ್ಮತನವನ್ನು ಉಳಿಸಿ, ಹೊಸತನ ಸೃಷ್ಟಿ ಮಾಡಿ, ಸ್ವಯಂಪ್ರೇರಿತ ರಚನಾ ಸಾಮರ್ಥ್ಯವನ್ನು ಜಾನಪದ ಮೂಡಿಸುವುದರಿಂದ ಎಲ್ಲರೂ ಜಾನಪದ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಪಾಲಿಕೆ ಸದಸ್ಯ ಬಿ.ಎಂ.ನಟರಾಜು, ಸಾಹಿತಿ ಬನ್ನೂರು ಕೆ.ರಾಜು, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಕೋದಂಡರಾಮು.ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: