ದೇಶ

ಕಾನ್ಪುರದ 8 ಪೊಲೀಸರ ಹತ್ಯೆ ಪ್ರಕರಣ: ತನಿಖೆಯಲ್ಲಿ ಸಿಕ್ಕಿ ಬೀಳುತ್ತಿರುವ ಪೊಲೀಸರು!

ಕಾನ್ಪುರ,ಜು.6-ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಹಾಗೂ ಆತನ ಸಹಚರರಿಂದ 8 ಪೊಲೀಸರು ಹತ್ಯೆಯಾದ ಪ್ರಕರಣದ ಕುರಿತು ತನಿಖೆ ಚುರುಕಾಗಿದೆ. ತನಿಖೆ ನಡೆಸಿದಷ್ಟೂ ಪ್ರಕರಣದಲ್ಲಿ ಪೊಲೀಸರೇ ಸಿಕ್ಕಿ ಬೀಳುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇಬ್ಬರು ಸಬ್​ ಇನ್ಸ್​ಪೆಕ್ಟರ್​ಗಳು ಹಾಗೂ ಓರ್ವ ಪೇದೆಯನ್ನು ಸಸ್ಪೆಂಡ್​ ಮಾಡಿ ಆದೇಶ ಹೊರಡಿಸಲಾಗಿದೆ.

ಸಬ್​ ಇನ್ಸ್​​ಪೆಕ್ಟರ್​​ಗಳಾದ ಕನ್ವರ್​ಪಾಲ್​, ಕೃಷ್ಣಕುಮಾರ್​ ಶರ್ಮಾ ಮತ್ತು ಪೇದೆ ರಾಜೀವ್​ ಎಂಬುವರನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಲಾಗಿದೆ. ವಿಚಾರಣೆಯನ್ನೂ ಪ್ರಾರಂಭಿಸಲಾಗಿದೆ ಎಂದು ಕಾನ್ಪುರ ಎಸ್​ಎಸ್​ಪಿ ದಿನೇಶ್​ ಕುಮಾರ್​ ತಿಳಿಸಿದ್ದಾರೆ.

ನಿನ್ನೆ ಪೊಲೀಸರು ವಿಕಾಸ್ ದುಬೆಯ ಸಹಚರ ದಯಾ ಶಂಕರ್​ ಅಗ್ನಿಹೋತ್ರಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ವಿಕಾಸ್​ ದುಬೆಗೆ ಪೊಲೀಸ್​ ವಲಯದಲ್ಲೇ ಹಲವು ಜನರ ಹಿಂಬಾಲಕರು ಇದ್ದಾರೆ. ಬಂಧನದ ಮಾಹಿತಿಯನ್ನು ಚೌಬೆಪುರ ಪೊಲೀಸ್ ಠಾಣೆಯಿಂದಲೇ ಕರೆ ಮಾಡಿ ತಿಳಿಸಲಾಗಿತ್ತು. ಹಾಗಾಗಿ ಮೊದಲೇ ವಿಕಾಸ್​ ದುಬೆ ತನ್ನ ಜನರನ್ನು, ಮಾರಕಾಸ್ತ್ರಗಳನ್ನು ಸಿದ್ಧಪಡಿಸಿದ್ದ ಎಂದು ಅಗ್ನಹೋತ್ರಿ ತಿಳಿಸಿದ್ದ.

ಪೊಲೀಸರ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವತಃ ಗಮನಹರಿಸುತ್ತಿದ್ದಾರೆ. ಈಗಾಗಲೇ ಚೌಬೇಪುರ ಠಾಣಾಧಿಕಾರಿ ವಿನಯ್​ ತಿವಾರಿ ಎಂಬುವರನ್ನು ಅಮಾನತು ಮಾಡಿ, ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೊಲೀಸ್​ ಎನ್​ಕೌಂಟರ್​ ಪ್ರಕರಣವನ್ನು ಬಗೆದಷ್ಟೂ ಪೊಲೀಸ್​ ಸಿಬ್ಬಂದಿಯ ಕಾಲಬುಡಕ್ಕೇ ಬರುತ್ತಿದೆ. ಅದಿನ್ನೆಷ್ಟು ಜನರ ಕೈವಾಡ ಇದೆಯೋ ಎಂಬ ಅನುಮಾನ ವ್ಯಕ್ತವಾಗಿದೆ. (ಎಂ.ಎನ್)

Leave a Reply

comments

Related Articles

error: