ಪ್ರಮುಖ ಸುದ್ದಿಮೈಸೂರು

ಬಾಬು ಜಗಜೀವನ ರಾಮ್ 34ನೇ ಪುಣ್ಯತಿಥಿ ಆಚರಿಸಿದ ಎಸ್ ಟಿ ಸೋಮಶೇಖರ್ : ರಾಜ್ಯ, ಮೈಸೂರಲ್ಲಿ ಲಾಕ್ ಡೌನ್ ಪ್ರಶ್ನೆಯೇ ಇಲ್ಲ

ಬೆಂಗಳೂರು/ಮೈಸೂರು,ಜು.6:-  ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ವಿಧಾನಸೌಧ ಪಶ್ಚಿಮದ್ವಾರ ಬಳಿ ಇರುವ ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯತಿಥಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಚಿವರು  ಬಾಬು ಜಗಜೀವನ ರಾಮ್ ಅವರ 34ನೇ ಪುಣ್ಯತಿಥಿ ಇದಾಗಿದ್ದು, ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದ್ದೇನೆ. ಈ ದಿನ ನಾನು ಮೈಸೂರಿನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಇರಬೇಕಾಯಿತು ಎಂದು ತಿಳಿಸಿದರು.

ಬಾಬು ಜಗಜೀವನ ರಾಮ್ ಅವರು ಅನೇಕ ಸಮಾಜ ಸುಧಾರಕ ಕಾರ್ಯಗಳನ್ನು ಮಾಡಿದ್ದು, ಮಹಾನ್ ದಲಿತ ನಾಯಕರಾಗಿದ್ದಾರೆ. ಅಸ್ಪೃಶ್ಯತೆ ವಿರುದ್ಧ ಆಗಲೇ ಧನಿ ಎತ್ತಿ ಶೋಷಿತರ ಪರ ನಿಂತಿದ್ದರು. ಇವರ ಈ ವ್ಯಕ್ತಿತ್ವ ಅನುಕರಣೀಯ ಹಾಗೂ ಆದರ್ಶ ಎಂದು ಸಚಿವ ಸೋಮಶೇಖರ್ ಹೇಳಿದರು.

ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ

ರಾಜ್ಯದಲ್ಲಿ ಸದ್ಯ ಸಂಪೂರ್ಣ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಸಹ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮೈಸೂರಿನಲ್ಲೂ ಇಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿದೆ. ಅಲ್ಲಿ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಸುಸಜ್ಜಿತ ಆಸ್ಪತ್ರೆಗಳ ವ್ಯವಸ್ಥೆಯೂ ಇದ್ದು, ಹಾಸಿಗೆ ಕೊರತೆಯೂ ಇಲ್ಲದಂತೆ ನೋಡಿಕೊಳ್ಳಲಾಗಿದೆ ಎಂದು   ತಿಳಿಸಿದರು.

ಸಿದ್ದರಾಮಯ್ಯ ಆರೋಪಕ್ಕೆ ಸುಧಾಕರ್ ಉತ್ತರ

ಕೋವಿಡ್-19 ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಆರೋಪದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಆರೋಗ್ಯ ಇಲಾಖೆ ಹಾಗೂ ಕೋವಿಡ್ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಸಚಿವರಾದ ಸುಧಾಕರ್ ಅವರಿಗೆ ತಿಳಿದಿದ್ದು, ಅವರು ಈಗಾಗಲೇ ಸಮರ್ಪಕ ಉತ್ತರವನ್ನು ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನೇನೂ ಹೆಚ್ಚಿಗೆ ಹೇಳಲಾರೆ ಎಂದು   ಉತ್ತರಿಸಿದರು.

ವಿಧಾನಸೌಧ ಪಶ್ಚಿಮದ್ವಾರ ಬಳಿ ಇರುವ ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯತಿಥಿ ಅಂಗವಾಗಿ ಪ್ರತಿಮೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: