ಮೈಸೂರು

ಅನ್ವಯಿಕೆಯನ್ನು ರಂಗಭೂಮಿಯಲ್ಲಿ ಗುರುತಿಸುವ ಕೆಲಸವಾಗಬೇಕು : ಡಾ.ನ.ರತ್ನ

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ  ಡಾ.ಗಂಗೂಬಾಯಿ ಹಾನಗಲ್ ಸಂಗೀತ  ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ವಿಶ್ವರಂಗಭೂಮಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗಕರ್ಮಿ ಡಾ.ನ.ರತ್ನ, ವಿಶ್ವರಂಗಭೂಮಿಯನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ತಂದವರು ಶ್ರೀಕಂಠಗುಂಡಪ್ಪ. ರಂಗಭೂಮಿಯ ಎಲ್ಲಾ ಮಾಹಿತಿಗಳನ್ನು ತುಂಬಾ  ವರ್ಷಗಳಿಂದ ಕಲೆ ಹಾಕಿ, ರಂಗ ನಿಧಿ ಜಾಲತಾಣವನ್ನು ರಚಿಸಿ ರಂಗಭೂಮಿಗೆ ಒಂದು ಶಾಶ್ವತ ಬದುಕು ಕಟ್ಟಿಕೊಟ್ಟಿದ್ದಾರೆ. ಈ ಜಾಲತಾಣದ ರಚನೆಯಲ್ಲಿ ಹಲವಾರು ಕಾಣದ ಕೈಗಳ ಪರಿಶ್ರಮವಿದೆ ಎಂದು ಶ್ಲಾಘಿಸಿದರು.

ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್ ಕಾರ್ಯಕ್ರಮ ಕುರಿತಾದ ವಿಶೇಷ ಉಪನ್ಯಾಸ ನೀಡಿದರು. ಇತಿಹಾಸವನ್ನು ತಿರುವಿ ಹಾಕಿದಾಗ ಕನ್ನಡ ರಂಗಭೂಮಿಗೆ ಸಂಬಂಧಿಸಿದಂತೆ  ಮೊದಲ ಹೆಜ್ಜೆ ನಡೆದದ್ದೇ ಮೈಸೂರಿನಲ್ಲಿ. ಜಾಲತಾಣ ರಚಿಸಲು  ಅಷ್ಟಾಗಿ ಯಾರೂ ಸಹ ಪ್ರಯತ್ನಿಸಿರಲಿಲ್ಲ. ಇಂದು ಆ ಸತ್ಕಾರ್ಯವೂ ಸಹ ಮೈಸೂರಿನಲ್ಲಿ ನೆರವೇರುತ್ತಿರುವುದು ಸಂತಸದ ಸಂಗತಿ ಎಂದರು.

ರಂಗಭೂಮಿಯ ಇತಿಹಾಸವನ್ನು ಒಳಹೊಕ್ಕು ನೋಡಿದಾಗ, ಅಲ್ಲಿ ಹಲವಾರು ಕಾಣದ ಕೈಗಳು ತಮ್ಮ ಅವಿರತ ಶ್ರಮದಿಂದ ದುಡಿದಿದ್ದಾರೆ. ಆದರೆ ವೇದಿಕೆಯ ಮೇಲೆ ನಮಗೆ ಕಾಣಸಿಗುವುದು ನಟ, ಹಾಡುಗಾರ, ರಂಗ ನಿರ್ದೇಶಕ, ತಂತ್ರಜ್ಞ ಇವರಷ್ಟೇ. ತೆರೆಯ ಹಿಂದೆ ರಂಗಭೂಮಿಯ ಯಶಸ್ಸಿಗೆ ಕಾರಣರಾದ ಅದೆಷ್ಟೋ ಜೀವಗಳು ದುಡಿದಿವೆ. ಆದರೆ ನಾವು ಅವರನ್ನು ದಾಖಲಿಸುವಲ್ಲಿ ಸೋತಿದ್ದೇವೆ. ಪ್ರಸ್ತುತ ದಾಖಲೆಯ ಮುಖವನ್ನು ಪುನರುಜ್ಜೀವನಗೊಳಿಸುವುದು ಅಗತ್ಯವಿದೆ ಎಂದು ಹೇಳಿದರು.

ರಂಗಭೂಮಿಯಲ್ಲಿ ಕಲೆ ತುಂಬಾ ಮುಖ್ಯ. ಆದರೆ ಅದು ಅಲ್ಲಿ ಅನ್ವಯಿಕವಾಗುತ್ತದೆ. ಆದರೆ ನಾವು ರಂಗಭೂಮಿಯಲ್ಲಿ ಅನ್ವಯಿಕತೆಯನ್ನು ಗಮನಿಸುತ್ತಿಲ್ಲ. ಅನ್ವಯಿಕೆ ರಂಗಭೂಮಿಯಲ್ಲಿ ಹೆಚ್ಚಾಗಿ ಬೆಳೆಯುತ್ತಿದೆ. ಅದನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ ಎಂದರು.

ಇದಕ್ಕೂ ಮುನ್ನ ಡಾ. ಆರ್.ಪೂರ್ಣಿಮಾ ಅವರು ಬರೆದು ಪ್ರಸ್ತುತಪಡಿಸಿದ ಶೋಷಣೆ ಮತ್ತು ಸಬಲೀಕರಣ ಕಡೆಗೆ ಎಂಬ ನಾಟಕವನ್ನು  ಪ್ರದರ್ಶಿಸಲಾಯಿತು. ಶ್ರೀಕಂಠಗುಂಡಪ್ಪ ಅವರ ರಂಗಭೂಮಿಯ ಚಾರಿತ್ರಿಕ ದಾಖಲೆಗಳನ್ನೊಳಗೊಂಡ ರಂಗನಿಧಿ ಜಾಲತಾಣದ ಉದ್ಘಾಟನೆ, ರಂಗದಾಖಲೆಗಳ ಪ್ರದರ್ಶನ ಮತ್ತು ‘ಜೊತೆ ಕೂತು ಮಾತು’ ಗ್ರಂಥ ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿವಿಯ ಕುಲಪತಿ ಡಾ.ಸರ್ವಮಂಗಳಾ ಶಂಕರ್, ಕುಲಸಚಿವ ಪ್ರೊ.ನಿರಂಜನ ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: