ಮೈಸೂರು

ಯಾವುದೇ ಭೂಮಿಯನ್ನು ಒತ್ತುವರಿ ಮಾಡಿಲ್ಲ, ನನ್ನ ಮೇಲಿನ ಆರೋಪ ಸುಳ್ಳು : ಗೋ.ಮಧುಸೂದನ್ ಸ್ಪಷ್ಟನೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಿ ಮಂಗಲ ಗ್ರಾಮದ ಸರ್ವೆ ನಂ.20 ರಲ್ಲಿ ಟೈಗರ್ ರಾಂಚ್ ಬಳಿ ನನಗೆ ಸಂಬಂಧಿಸಿದ ಮಾಲಿಕತ್ವ ಜಮೀನುಗಳಿಗೆ ಸಂಬಂಧಿಸಿದ ಎಲ್ಲಾ ಆರೋಪಗಳು ಸುಳ್ಳು ಎಂದು ವಿಧಾನ ಪರಿಷತ್  ಮಾಜಿ ಸದಸ್ಯ ಗೋ.ಮಧುಸೂದನ್ ಸ್ಪಷ್ಟೀಕರಣ ನೀಡಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಯಾವುದೇ ಅರಣ್ಯ ಒತ್ತುವರಿ ಮಾಡಿಲ್ಲ. ಹರಿಜನ ಭೂಮಿ ಖರೀದಿಸಿಲ್ಲ. ಆ ರೀತಿ ಖರೀದಿ ಮಾಡಿದ್ದ 18 ಎಕರೆ ಜಮೀನನ್ನು ಈಗಾಗಲೇ ಸರ್ಕಾರಕ್ಕೆ  ಬಿಟ್ಟುಕೊಟ್ಟಿದ್ದೇನೆ. ಈಗ ನನ್ನ ವಶದಲ್ಲಿರುವುದು ಕಾನೂನು ರೀತ್ಯಾ ಖರೀದಿಸಿದ ಭೂಮಿ ಎಂದು ಹೇಳಿದರು.

ಈ ಜಾಗಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇತ್ತು. ಈಗಾಗಲೇ ಹೈಕೋರ್ಟ್ ಇದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿದೆ. ಹೀಗಿದ್ದರೂ ಯಥಾಸ್ಥಿತಿ ಕಾಯ್ದುಕೊಳ್ಳುವ ಬದಲು ಎಲ್ಲಾ ಜಮೀನಿನ ದಾಖಲೆಗಳನ್ನು ಸರ್ಕಾರಿ ಖಾತೆಗೆ ವರ್ಗಾಯಿಸಿ ನನಗೆ ಯಾವುದೇ ಲಿಖಿತ ನೋಟಿಸನ್ನು ನೀಡದೇ, ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಬಾಡಿಗೆ ಜನರಿಂದ ಅಲ್ಲಿ ನಿರ್ಮಾಣವಾಗಿದ್ದ ಕಾಟೇಜ್‍ನ್ನು ತೆರವುಗೊಳಿಸಿರುತ್ತಾರೆ. ಇದು ಅನ್ಯಾಯ ಮತ್ತು ಅಕ್ರಮ ಎಂದು ಆರೋಪಿಸಿದರು.

ಟೈಗರ್ ರಾಂಚ್‍ಗೆ ಸಂಬಂಧಿಸಿದ ವ್ಯಾಜ್ಯ ಇವತ್ತಿನ ವ್ಯಾಜ್ಯ ಅಲ್ಲ. 1994-95 ರ  ವ್ಯಾಜ್ಯವಾಗಿದೆ. ಈ ವಿಷಯದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ ಎಂದ ಅವರು, ಉಪ ಚುನಾವಣೆಯ ಸಂದರ್ಭದಲ್ಲಿ ಕಪ್ಪು ಚುಕ್ಕೆ ತರಲು ಈ ರೀತಿಯ ಕೆಲಸಗಳನ್ನು ಮಾಡಿದ್ದಾರೆ. ಜಮೀನಿನ ಒತ್ತುವರಿ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಅವರು ಮಾಹಿತಿ ನೀಡಿದರು. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗುವುದಾಗಿ  ಇದೇ ಸಂದರ್ಭದಲ್ಲಿ ತಿಳಿಸಿದರು.

ಬಿಜೆಪಿ ಗೆಲವು ಖಚಿತ: ಗುಂಡ್ಲುಪೇಟೆ-ನಂಜನಗೂಡು ವಿಧಾನಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ದುರುದ್ದೇಶದಿಂದ ಇಂತಹ ಆರೋಪಗಳನ್ನು ಮಾಡಿದ್ದಾರೆ. ಇದು ನನ್ನ ಮೇಲಿನ ಆರೋಪ ಅಲ್ಲ. ಬದಲಿಗೆ ಬಿಜೆಪಿ ವಿರುದ್ಧ ಮಾಡಿರುವ  ಸಂಚು ಎಂದು ಆರೋಪಿಸಿದರು.

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ. ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ವಿರುದ್ಧ ಬಹುಮತದ ಅಂತರದಿಂದ ಗೆಲುವು ಸಾಧಿಸಲಿದೆ. ನನ್ನ ಹೋರಾಟದ ವ್ಯಾಜ್ಯ ಮುಗಿದಿದ್ದು, ಇವತ್ತಿನಿಂದಲೇ ಚುನಾವಣೆಯ ಕಣಕ್ಕೆ ಇಳಿಯುವುದಾಗಿ ಅವರು ತಿಳಿಸಿದರು. (ಎಲ್.ಜಿ-ಎಸ್.ಎಚ್)

 

Leave a Reply

comments

Related Articles

error: