ಮೈಸೂರು

ಏಪ್ರಿಲ್ 1 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ

ಲಾರಿ ಮಾಲೀಕರ ಮೇಲೆ ನಡೆಯುತ್ತಿರುವ ಅಕ್ರಮ, ಅನ್ಯಾಯ ಹಾಗೂ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸಲು ಏಪ್ರಿಲ್ 1 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಮೈಸೂರು ಜಿಲ್ಲಾ ಟ್ರಕ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಶ್ರೀನಿವಾಸರಾವ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಆರ್‍ಡಿಎಐ ರವರು ಇನ್ಶೂರೆನ್ಸ್ ಮೂರನೆಯ ಪಾರ್ಟಿ ಪ್ರೀಮಿಯಂ (ಟಿಟಿಪಿ) ಪಾಲಿಸಿಯನ್ನು ವರ್ಷದಿಂದ ವರ್ಷಕ್ಕೆ ಏಕಾಏಕಿ ಸರಿಯಾದ ಅಂಕಿ ಅಂಶಗಳನ್ನು ನೀಡದೆ  ಹೆಚ್ಚಿಸಿದೆ.ಈಗಾಗಲೇ ಹೊಸದಿಲ್ಲಿಯ ಲಾರಿ ಮಾಲೀಕರ ರಾಷ್ಟ್ರೀಯ ಅಂಗ ಸಂಸ್ಥೆಗೆ  ಪ್ರೀಮಿಯಂ ಅನ್ನು ಹೆಚ್ಚಿಸದಿರಲು ಮನವಿ ಪತ್ರ ಸಲ್ಲಿಸಿದ್ದೇವೆ. ಇದಲ್ಲದೆ, ಲಾರಿ ಚಾಲಕ/ ಮಾಲೀಕರಿಂದ ಹಮಾಲಿಗಳಿಂದ ಪ್ರತಿನಿತ್ಯ ಲೋಡಿಂಗ್/ ಆನ್‍ಲೋಡಿಂಗ್ ಮಾಡಲು ಕಾನೂನು ಬಾಹಿರವಾಗಿ ಮತ್ತು ಅಕ್ರಮವಾಗಿ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ.  ನಮ್ಮ ಅಸೋಸಿಯೇಶನ್ ಅಡಿ 1 ಸಾವಿರ ಲಾರಿಗಳಿದ್ದು, ವಸೂಲಿ ಮಾಡುವುದನ್ನು ಪ್ರಶ್ನಿಸಿದರೆ ಬಲಪ್ರಹಾರ ಮಾಡುತ್ತಾರೆ. ಲೋಡ್ ಖಾಲಿ ಮಾಡುವುದಿಲ್ಲ. ಹೀಗಾಗಿ ದುಡ್ಡು ಕೊಟ್ಟು ಲೋಡ್ ಖಾಲಿ ಮಾಡಿಸುತ್ತಿದ್ದೇವೆ ಎಂದರು.

ಹಮಾಲಿಗಳು ಸರಕು ಸಂಬಂಧಪಟ್ಟ ವರ್ತಕರ ಕಾರ್ಖಾನೆ, ರಾಜ್ಯ ಉಗ್ರಾಣಗಳಿಂದ ಸಾಕಷ್ಟು ಕಾನೂನು ರೀತಿ ಕೂಲಿ ಹಾಗೂ ಸೌಲಭ್ಯಗಳನ್ನು ಪಡೆದುಕೊಂಡರೂ ಅಕ್ರಮವಾಗಿ ಲಾರಿ ಚಾಲಕ/ ಮಾಲೀಕರಿಂದ ವಸೂಲಿ ಮಾಡುತ್ತಿರುವುದು ನಷ್ಟವನ್ನುಂಟು ಮಾಡುತ್ತಿದೆ. ನಮಗೆ ರಸ್ತೆ ತೆರಿಗೆ, ದುಬಾರಿ ಇನ್ಶೂರೆನ್ಸ್, ಆರ್‍ಟಿಒ ಶುಲ್ಕ, ಟೋಲ್, ಡ್ರೈವರ್ ಸಂಬಳ ಇವುಗಳು ಭಾರವಾಗಿದ್ದು, ಈ ನಡುವೆ ಹಮಾಲಿಗಳು ಲೋಡಿಂಗ್/ ಆನ್‍ಲೋಡಿಂಗ್ ಮಾಡಲು ತಿಂಗಳಿಗೆ ಸರಾಸರಿ 18 ರಿಂದ 20 ಸಾವಿರದವರೆಗೆ ಪ್ರತಿ ಲಾರಿಗಳಿಂದ ಅಕ್ರಮವಾಗಿ ಮಾಮೂಲು ವಸೂಲು ಮಾಡುತ್ತಿದ್ದಾರೆ. ಇದಕ್ಕೆ ವರ್ತಕ ಹಾಗೂ ಸರಕಿಗೆ ಸಂಬಂಧಪಟ್ಟವರ ಬೆಂಬಲ ಸಹ ಇದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್, ಅಯಾಜ್ ಅಹ್ಮದ್, ಶ್ರೀಕಂಠಸ್ವಾಮಿ, ಖದೀರ ಪಾಷ, ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: