
ಕರ್ನಾಟಕಪ್ರಮುಖ ಸುದ್ದಿ
ಬೆಂಗಳೂರು: 395 ಪೊಲೀಸರಿಗೆ ಕೊರೊನಾ ಸೋಂಕು
ಬೆಂಗಳೂರು,ಜು.9-ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪೊಲೀಸ್ ಇಲಾಖೆಗೂ ಕೊರೊನಾ ಭೀತಿ ಬೆಂಬಿಡದೆ ಕಾಡುತ್ತಿದೆ.
ಸತತವಾಗಿ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗುತ್ತಿದೆ. ಹಲವು ಕಡೆ ಪೊಲೀಸ್ ಠಾಣೆ ಸೀಲ್ಡೌನ್ ಮಾಡಲಾಗುತ್ತಿದೆ. ಇವತ್ತಿನ ವರದಿಯಂತೆ ಬೆಂಗಳೂರಿನಲ್ಲಿ 395 ಜನ ನೌಕರರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
395 ಮಂದಿ ಸೋಂಕಿತರಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಉಳಿದ 390 ಜನರು ವಿವಿಧ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಸಿಲಿಕಾನ್ ಸಿಟಿಯಲ್ಲಿ 20ಕ್ಕೂ ಹೆಚ್ಚು ಪೊಲೀಸ್ ಠಾಣೆಗಳು ಸೀಲ್ಡೌನ್ ಆಗಿದೆ. ವೈಟ್ಫೀಲ್ಡ್, ಶಿವಾಜಿನಗರ, ಕೋರಮಂಗಲ ಸೇರಿದಂತೆ ನಗರ ಹಲವು ಸ್ಟೇಷನ್ ಬಂದ್ ಆಗಿದೆ. ನೂರಾರು ಪೊಲೀಸರು ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಸುಮಾರು 5 ಸಾವಿರ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ ಮುಂಬೈ ನಗರದಲ್ಲಿ ಮಾತ್ರ 2500ಕ್ಕಿಂತ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿದೆ. ದೇಶದಲ್ಲಿ ಅತಿ ಹೆಚ್ಚು ಪೊಲೀಸರು ಕೊರೊನಾಗೆ ಸಿಲುಕಿಕೊಂಡಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ.
ಇನ್ನು ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಪೊಲೀಸ್ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ದಾಸರಹಳ್ಳಿ ಜೆಡಿಸ್ ಶಾಸಕ ಆರ್.ಮಂಜುನಾಥ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. (ಎಂ.ಎನ್)