ಮೈಸೂರು

ಜನಮನ ರಂಜಿಸಿದ ಜಿಲ್ಲಾ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ

ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ನಡೆದ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ  ಜಿಲ್ಲಾ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಜನಮನ ರಂಜಿಸಿತು.

ಗ್ರಾಮದ ಹಸು ವ್ಯಾಪಾರಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಚಿಕ್ಕಮಂಗಳೂರು, ಮಂಡ್ಯ, ಅರಕಲಗೂಡು, ಸಾಲಿಗ್ರಾಮ, ಹುಣಸೂರು, ಕೆ.ಆರ್. ನಗರ ಸೇರಿದಂತೆ ಇತರ ಕಡೆಗಳಿಂದ ಸುಮಾರು 27 ಜತೆ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಈ ಬಾರಿಯ ಸ್ಪರ್ಧೆಯಲ್ಲಿ ಭಾರಿ ಗಾತ್ರದ ಹೋರಿಗಳು ಪಾಲ್ಗೊಂಡು ಗಮನ ಸೆಳೆದರೂ, ಗೂಳಿಗಳ ಗೆಲವು ಮಾತ್ರ ಕಾಣಲಿಲ್ಲ, ಎತ್ತುಗಳು ಗಾಡಿಯನ್ನು ಎಳೆದು ಗುರಿಯತ್ತ ಮುನ್ನುಗುವಾಗ ಅವುಗಳ ಬೆಂಬಲಿಗರು ಸಿಳ್ಳೆ ಕೇಕೆ ಹಾಕಿ ಹುರಿದುಂಬಿಸಿದರು.ಗಾಡಿಯ ಮೆಲೆ ಇದ್ದವರು ಚಾವಟಿ ಬೀಸುತ್ತಾ ತಮ್ಮ ಎತ್ತುಗಳ ಬಾಲ ಮುರಿಯುತ್ತ, ಹಲ್ಲಿನಿಂದ ಕಚ್ಚುತ್ತಾ ಗುರಿ ತಲುಪಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದ ದೃಶ್ಯ ಕಂಡುಬಂತು.

ಮಂಚದೇವನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ. ಬಿ. ಮಂಜುನಾಥ್ ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಕ್ರೀಡೆಗಳು ಇತ್ತಿಚೀನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪ್ರಸಿದ್ಧಿಯಾಗಿರುವಂತೆ, ಕರಾವಳಿ ಭಾಗದಲ್ಲಿ ಕಂಬಳ ಖ್ಯಾತಿ ಗಳಿಸಿದೆ. ಹಾಗೆಯೇ  ಮೈಸೂರು ಪ್ರಾಂತ್ಯದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ವಿಶೇಷ ಸ್ಥಾನಮಾನ ಇದೆ ಎಂದು ಹೇಳಿದರು.

ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ವೀಕ್ಷಿಸಲು ಜಿಲ್ಲೆಯ ವಿವಿಧೆಡೆಯಿಂದ ಒಂದು ಸಾವಿರಕ್ಕೂ ಹೆಚ್ಚಿನ ಜನರು ಆಗಮಿಸಿದ್ದರು. ಈ ಸ್ಪರ್ಧೆಯನ್ನು ಟಿಬೆಟನ್ ನಿರಾಶ್ರಿತರು ಬಿಸಿಲನ್ನು ಲೆಕ್ಕಿಸದೆ ಬೆಳಿಗ್ಗೆಯಿಂದ ಪಂದ್ಯಾವಳಿ ಮುಗಿಯುವವರೆಗೂನೋಡುತ್ತ ಕುಳಿತಿರುವುದು ವಿಶೇಷವಾಗಿತ್ತು.

ಬೈಲಕುಪ್ಪೆ ಹಸು ವ್ಯಾಪಾರಿಗಳ ಬಳಗದವರಾದ ಮಂಜುನಾಥ್, ಶಿವರಾಜ್, ರಾಜೇಶ್, ಇಮ್ರಾನ್ ಖಾನ್, ಶರತ್, ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ, ವೀಕ್ಷಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂದಾದರು.

ಪಂದ್ಯದ ಮುಖ್ಯ ತೀರ್ಪುಗಾರರಾಗಿ ಬೈಲಕುಪ್ಪೆ ಗಜಾನನ ಸೇವಾ ಸಮಿತಿಯ ಅಧ್ಯಕ್ಷ ಎ.ಸಿ. ರಾಮಕೃಷ್ಣ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಾಲಿಗ್ರಾಮದ ರಾಜೇಗೌಡ ನಿಹಾಲ್ ಪಡೆದಿದ್ದು ( ತಿರುಮಾಲಪುರ) 25,000  ರೂ.ನಗದು ಹಾಗೂ ಆಕರ್ಷಕ ಟ್ರೋಪಿಯನ್ನು ಪಡೆದುಕೊಂಡರು.

ದ್ವಿತೀಯ ಬಹುಮಾನವನ್ನು ಸಾಲಿಗ್ರಾಮದ ಕೃಷ್ಣೇಗೌಡರ ಮಗ ವಿಜಿ  ಪಡೆದಿದ್ದು,15,000ರೂ ನಗದು ಹಾಗೂ ಟ್ರೋಪಿಯನ್ನು ಹಾಗೂ ತೃತೀಯ ಬಹುಮಾನವನ್ನು ಅರಕಲಗೂಡು ತಾಲೂಕಿನ ಕಾರ್ಗಾಲ್ ಗ್ರಾಮದ ನೇಗಿಲಯೋಗಿ ಜೋಡಿಯು 5,000 ರೂ.ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಗ್ರಾಪಂ ಸದಸ್ಯರಾದ ಆರ್.ಮಂಜೇಶ್, ಕೆಬಲ್ ದಿನೇಶ್, ರಘು, ನಾಗರಾಜ, ಮಂಜುನಾಥ್,ಮಾಜಿ ಗ್ರಾಪಂ ಅಧ್ಯಕ್ಷೆ ಶೋಭ ಶ್ರೀನಿವಾಸ್, ಗ್ರಾಮದ ಮುಖಂಡರಾದ ಆಲನಹಳ್ಳಿ ನಂಜಪ್ಪ, ಕೊಪ್ಪ ಶಿವಣ್ಣ, ಸೇರಿದಂತೆ ಹಲವಾರು ಮಂದಿ ಹಾಜರಿದ್ದರು. (ಆರ್.ಬಿ.ಆರ್-ಎಸ್.ಎಚ್)

Leave a Reply

comments

Related Articles

error: