ದೇಶಪ್ರಮುಖ ಸುದ್ದಿ

ಆತನ ಅಪರಾಧಗಳಿಗೆ ತಕ್ಕ ಶಿಕ್ಷೆಯಾಗಿದೆ: ವಿಕಾಸ್ ದುಬೆ ಅಂತ್ಯಕ್ರಿಯೆ ವೇಳೆ ಪತ್ನಿಯ ಆಕ್ರೋಶ

ನವದೆಹಲಿ,ಜು.11-ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಅಂತ್ಯಸಂಸ್ಕಾರದ ವೇಳೆ ಆತನ ಪತ್ನಿ ರಿಚಾ ದುಬೆ ‘ಹೌದು, ನನ್ನ ಗಂಡ ಇದುವರೆಗೂ ಮಾಡಿದ್ದೆಲ್ಲವೂ ತಪ್ಪೇ… ಆತನ ಅಪರಾಧಗಳಿಗೆ ತಕ್ಕ ಶಿಕ್ಷೆಯಾಗಿದೆ’ ಎಂದಿದ್ದಾರೆ.

ಎಂಟು ಪೊಲೀಸರನ್ನು ಕೊಂದು ಪರಾರಿಯಾಗಿದ್ದ ವಿಕಾಸ್ ದುಬೆಯನ್ನು ಮೊನ್ನೆ (ಜು.9)ರಂದು ಬಂಧಿಸಲಾಗಿತ್ತು. ನಿನ್ನೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುತ್ತಿದ್ದಾಗ ಎನ್ ಕೌಂಟರ್ ಮಾಡಲಾಗಿತ್ತು. ವಿಕಾಸ್​ ದುಬೆಯ ಅಂತ್ಯಕ್ರಿಯೆಯನ್ನು ನಿನ್ನೆ ಬಿಗಿ ಭದ್ರತೆಯಲ್ಲಿ ನೆರವೇರಿಸಲಾಯಿತು. ಈ ವೇಳೆ ಪೊಲೀಸರು ಮತ್ತು ಮಾಧ್ಯಮಗಳ ಮೇಲೆ ವಿಕಾಸ್​ ದುಬೆಯ ಹೆಂಡತಿ ರಿಚಾ ಹರಿಹಾಯ್ದ ಘಟನೆಯೂ ನಡೆಯಿತು.

ಮಾಧ್ಯಮಗಳು ರಿಚಾ ಅವರನ್ನು ಮಾತನಾಡಿಸಿದಾಗ ‘ಹೌದು, ಹೌದು, ಹೌದು ನನ್ನ ಗಂಡ ತಪ್ಪು ಮಾಡಿದ್ದ. ಇದೇ ರೀತಿ ಸಾಯಬೇಕೆಂಬುದು ಆತನ ಹಣೆಬರಹದಲ್ಲಿತ್ತು’ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ವಿಕಾಸ್​ ದುಬೆ ಎನ್​ಕೌಂಟರ್​ಗೆ ಮಾಧ್ಯಮಗಳೂ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಕಾಸ್​ ದುಬೆ ಅಪ್ಪ ರಾಮ್​ ಕುಮಾರ್ ದುಬೆ ತಾವು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದರು. ಹೀಗಾಗಿ, ವಿಕಾಸ್​ ದುಬೆಯ ಭಾವ ದಿನೇಶ್ ತಿವಾರಿ ಅಂತ್ಯಕ್ರಿಯೆ ನೆರವೇರಿಸಿದರು. ವಿಕಾಸ್ ದುಬೆಯ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಪತ್ನಿ ರಿಚಾ ದುಬೆ ಮತ್ತು ಪುತ್ರನನ್ನು ಬಂಧಿಸಲಾಗಿದೆ.

ಅರವತ್ತಕ್ಕೂ ಹೆಚ್ಚು ಕೊಲೆ ಮತ್ತು ದರೋಡೆ ಪ್ರಕರಣಗಳ ಆರೋಪಿ ವಿಕಾಸ್ ದುಬೆ ವಿರುದ್ಧ ರಾಹುಲ್ ತಿವಾರಿ ಎಂಬವರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು. ಅದರಂತೆ ಜು.3 ರಂದು ಆತನನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ವಿಕಾಸ್ ದುಬೆ ಮತ್ತು ಆತನ ಸಹಚರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೇದೆಗಳು ಸೇರಿ ಎಂಟು ಪೊಲೀಸರು ಮೃತಪಟ್ಟಿದ್ದರು. ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಪೊಲೀಸರು ಪ್ರೇಮ್ ಪ್ರಕಾಶ್ ಪಾಂಡೆ ಹಾಗೂ ಅತುಲ್ ದುಬೆ ಎಂಬ ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದರು.

ಎಂಟು ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದ ವಿಕಾಸ್ ದುಬೆಯನ್ನು ಜು.9 ರಂದು ಉತ್ತರ ಪ್ರದೇಶದ ಉಜ್ಜಯಿನಿ ಬಳಿ ಬಂಧಿಸಿದ್ದರು. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸ್​ ವಾಹನ ಪಲ್ಟಿ ಹೊಡೆದಿತ್ತು. ಈ ವೇಳೆ ಪೊಲೀಸರ ಬಳಿಯಿದ್ದ ಗನ್ ಎತ್ತಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದ ವಿಕಾಸ್​ ದುಬೆಯನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿತ್ತು. ಆತ್ಮರಕ್ಷಣೆಗಾಗಿ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಕಾನ್ಪುರ ಪೊಲೀಸರು ಸ್ಪಷ್ಟಪಡಿಸಿದ್ದರು.

ರಸ್ತೆಗೆ ಎಮ್ಮೆಗಳು ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿತ್ತು. ಆಗ ನಮ್ಮ ಸಿಬ್ಬಂದಿಯ ಬಳಿಯಿದ್ದ ಗನ್ ಕಿತ್ತುಕೊಂಡು ವಿಕಾಸ್​ ದುಬೆ ಪರಾರಿಯಾಗಲು ಪ್ರಯತ್ನಿಸಿದ. ಆಗ ಪೊಲೀಸರು ಆತನನ್ನು ಸುತ್ತುವರೆದು ಶರಣಾಗುವಂತೆ ಎಚ್ಚರಿಸಿದರಾದರೂ ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಈ ವೇಳೆ ದುಬೆಯನ್ನು ಎನ್​ಕೌಂಟರ್ ಮಾಡಬೇಕಾಗಿ ಬಂತು ಎಂದು ಪೊಲೀಸರು ಹೇಳಿದ್ದರು. (ಎಂ.ಎನ್)

 

 

Leave a Reply

comments

Related Articles

error: