ಪ್ರಮುಖ ಸುದ್ದಿಮೈಸೂರು

ಬೆಂಗಳೂರು-ಮೈಸೂರು ನಡುವಿನ ಪ್ರಯಾಣಕ್ಕೆ ನಿರ್ಬಂಧ ಸದ್ಯಕ್ಕಿಲ್ಲ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರೂ,ಜು.11:-  ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಸಮುದಾಯಕ್ಕೆ  ಕೊರೋನಾ ಹರಡುತ್ತಿರುವ ಅನುಮಾನವನ್ನು ಸಚಿವ ಎಸ್.ಟಿ.ಸೋಮಶೇಖರ್ ವ್ಯಕ್ತಪಡಿಸಿದರು.

ಮೈಸೂರಿನಲ್ಲಿಂದು   ಎನ್.ಆರ್.ಕ್ಷೇತ್ರದಲ್ಲಿ ಕೊರೋನಾ ಹೆಚ್ಚಳ ಕುರಿತು ಪ್ರತಿಕ್ರಿಯಿಸಿ  ಎನ್.ಅರ್. ಕ್ಷೇತ್ರದಲ್ಲಿ ಸಮುದಾಯಕ್ಕೆ ಹರಡಿರುವ ಅನುಮಾನ ವ್ಯಕ್ತವಾಗಿದೆ. ಸಂಪೂರ್ಣ ಕ್ಷೇತ್ರವನ್ನು ಮಿನಿ ಲಾಕ್ ಡೌನ್ ಮಾಡುವ ಅವಶ್ಯಕತೆ ಇದೆ. ಈ ಭಾಗದಲ್ಲಿ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಇಲ್ಲಿನ‌ ಜನರು ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿಲ್ಲ. ನಮ್ಮ ಅಧಿಕಾರಿಗಳಿಗೆ, ವೈದ್ಯಕೀಯ ಸಿಬ್ಬಂದಿಗೆ ಸಹಕಾರ‌ ನೀಡುತ್ತಿಲ್ಲ. ಅಲ್ಲಿನ ಜನಪ್ರತಿನಿಧಿಗಳು, ಸಮುದಾಯದ ಮುಖಂಡರೊಂದಿಗೆ ಮಾತನಾಡಿ ನಿರ್ಧರಿಸಲಾಗುವುದು. ಕೊರೋನಾ ನಿಯಂತ್ರಣಕ್ಕೆ ಮಿನಿ ಲಾಕ್ ಡೌನ್ ಮಾಡುವ ಅವಶ್ಯಕತೆ ಇದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಕೊರೋನಾ ವೈರಸ್ ನ ಸೋಂಕು ನಿಯಂತ್ರಣ ತಪ್ಪಿಲ್ಲ. ಆದರೆ ಮೈಸೂರು ಜಿಲ್ಲೆಯಲ್ಲಿ ದಿನ ಕಳೆದಂತೆ  ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಕೋವಿಡ್ ಕೇರ್ ಸೆಂಟರ್ ಗಳನ್ನು ಹೆಚ್ಚಳ ಮಾಡಲಾಗುತ್ತಿದೆ. ಮಂಡಕಳ್ಳಿಯಲ್ಲಿ ಸಿದ್ಧಗೊಂಡಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ 500 ಕ್ಕೂ ಹೆಚ್ಚು ಬೆಡ್ ಗಳಿವೆ. ಕೊರೋನಾ ಸಂಬಂಧ ಯಾವುದೇ ಪರಿಸ್ಥಿತಿ ಎದುರಾದರೂ ಎದುರಿಸಲು ಸಜ್ಜಾಗಿದ್ದೇವೆ. ಜನರು ಭಯ ಪಡುವ ಅಗತ್ಯವಿಲ್ಲ ಎಂದರು.

ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಎಲ್ಲಾ ಸಚಿವರು, ಶಾಸಕರು ಕಟಿಬದ್ಧರಾಗಿದ್ದಾರೆ. ನನಗೆ 8 ವಲಯಗಳ ಉಸ್ತುವಾರಿ ನೀಡಿದ್ದಾರೆ. ನಿನ್ನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಬೆಂಗಳೂರು-ಮೈಸೂರು ನಡುವಿನ ಪ್ರಯಾಣಕ್ಕೆ ನಿರ್ಬಂಧ ಸದ್ಯಕ್ಕಿಲ್ಲ. ಬೆಂಗಳೂರು ಟ್ರಾವೆಲ್‌ ಹಿಸ್ಟರಿ ಇದ್ದವರಿಗೆ ಕೊರೋನಾ ಸೋಂಕು ಬರುತ್ತಿರುವುದು ನಿಜ. ಬೆಂಗಳೂರು-ಮೈಸೂರು ನಡುವೆ ಪ್ರಯಾಣ ನಿರ್ಬಂಧ ಮಾಡಬೇಕು ಎಂಬ ವಿಚಾರ ಚರ್ಚೆಗೆ ಬಂದಿದೆ. ಆದರೆ ಪ್ರಯಾಣ ನಿರ್ಬಂಧ ಮಾಡಲು ಸಾಧ್ಯವಿಲ್ಲ. ಪ್ರಾರಂಭದಲ್ಲಿ ಹೊರಗಿನಿಂದ ಬೆಂಗಳೂರಿಗೆ ಬರಬೇಡಿ ಎಂಬ‌ ಸನ್ನಿವೇಶ ಇತ್ತು. ಈಗ ಬೆಂಗಳೂರಿನಿಂದ ಬೇರೆ ಕಡೆ ಬರಬೇಡಿ ಎಂಬ ಸ್ಥಿತಿ ಎದುರಾಗಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: