ಮೈಸೂರು

ಹುಂಡಿ ಹಣ ಎಣಿಸಲು ಬಂದು ಕಳ್ಳತನ : ನಾಲ್ವರು ವಶಕ್ಕೆ

ದೇವಸ್ಥಾನದ ಹುಂಡಿ ಹಣವನ್ನು ಎಣಿಸಲು ಬಂದವರೇ ಹಣವನ್ನು ಎಗರಿಸಿ ಸಿಕ್ಕಿಬಿದ್ದು, ಅವರನ್ನು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಗಾಯತ್ರಿಪುರಂ ನಿವಾಸಿ ಮೋಹನ್ ಎಂಬವರ ಪತ್ನಿ ಅನಸೂಯ, ಆಕೆಯ ಮಗ ವಿನೋದ್, ಕ್ಯಾತಮಾರನಹಳ್ಳಿ ನಿವಾಸಿ ರಾಮಚಂದ್ರ ಅವರ ಮಗ ಸಚ್ಚಿನ್ ಹಾಗೂ ಪ್ರಕಾಶ್ ಎಂಬವರ ಪುತ್ರ ಜಗದೀಶ್ ಕುಮಾರ್ ಎಂಬವರೇ ಹಣ ಕಳ್ಳತನ ಮಾಡಿದವರಾಗಿದ್ದಾರೆ.  ಮೈಸೂರಿನ ಪ್ರಖ್ಯಾತ ದೇವಸ್ಥಾನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸೋಮವಾರ ಬೆಳಿಗ್ಗಿನಿಂದಲೇ ಹುಂಡಿ ಹಣ ಎಣಿಕೆ ಕಾರ್ಯ ನಡೆಯುತ್ತಿತ್ತು. ಎಣಿಕೆ ಕಾರ್ಯದಲ್ಲಿ ಮಹಿಳೆಯರು, ಪುರುಷರು ಸೇರಿದಂತೆ ಸುಮಾರು 60ಮಂದಿ ಭಾಗವಹಿಸಿದ್ದರು. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ದೇವಸ್ಥಾನದ ಗುಮಾಸ್ತ ನಾಗರಾಜು ಹಣ ಎಣಿಕೆ ಸ್ಥಳಕ್ಕೆ ಬಂದಿದ್ದು ವಿನೋದ್ ಕೆಲವು ನೋಟುಗಳನ್ನು ಶರ್ಟ್ ಒಳಗಡೆ ಹಾಕುತ್ತಿರುವುದನ್ನು ಗಮನಿಸಿ ಕೂಡಲೇ ಪೊಲೀಸರ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಪ್ರತ್ಯೇಕ ಕೊಠಡಿಯೊಳಕ್ಕೆ ಕರೆದೊಯ್ದು ತಪಾಸಣೆ ನಡೆಸಿದ ವೇಳೆ ಕೆಲವು ನೋಟುಗಳು ದೊರಕಿವೆ. ಸಿಸಿಟಿವಿ ಫೂಟೇಜ್ ಗಳನ್ನು ಪರಿಶಿಲಿಸಿದ ಪೊಲೀಸರಿಗೆ ಅನಸೂಯ, ಸಚಿನ್ ಹಾಗೂ ಜಗದೀಶ್ ಎಂಬವರೂ ಕೂಡ ಹಣವನ್ನು ಕಳ್ಳತನ ಮಾಡುತ್ತಿರುವುದು ಕಂಡು ಬಂದಿದೆ. ಪರಿಶೀಲನೆ ನಡೆಸಿದ ಪೊಲೀಸರಿಗೆ ಮೂವರ ಬಳಿಯೂ ಹಣವಿರುವುದು ತಿಳಿದುಬಂದಿದೆ. ಕಳುವು ಮಾಡಿದ ಹಣವನ್ನು ಲೆಕ್ಕ ಮಾಡಲಾಗಿ ಒಟ್ಟು 66,160ರೂ ಪತ್ತೆಯಾಗಿದೆ. ಅಮೇರಿಕ ಹಾಗೂ ಸಿಂಗಪುರದ 8ನೋಟುಗಳೂ ಪತ್ತೆಯಾಗಿವೆ ಎನ್ನಲಾಗಿದೆ.

ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಹಿಂದೆಯೂ ಇಂತಹುದೇ ಪ್ರಕರಣದಲ್ಲಿ ಭಾಗಿಯಾಗಿರಬಹುದೇ ಎಂದು ತನಿಖೆ ನಡೆಸುತ್ತಿದ್ದು, ವಿಚಾರಣೆ ನಡೆಸುತ್ತಿದ್ದಾರೆ.  ಕಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: