
ಪ್ರಮುಖ ಸುದ್ದಿ
ಸಿದ್ದರಾಮಯ್ಯ ತಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ : ನಳಿನ್ ಕುಮಾರ್ ತಿರುಗೇಟು
ರಾಜ್ಯ( ಮಡಿಕೇರಿ) ಜು.11 :- ಕೊರೋನಾ ಸೋಂಕು ವ್ಯಾಪಿಸುವುದನ್ನು ತಡೆಯಲು ರಾಜ್ಯ ಸರ್ಕಾರ ಕೈಗೊಂಡ ಕಾರ್ಯಗಳ ಬಗ್ಗೆ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು ಕೊರೋನಾ ನಿಯಂತ್ರಣದ ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರವೆನ್ನುವ ಸಿದ್ದರಾಮಯ್ಯ ಅವರ ಆರೋಪಕ್ಕೆ ಈಗಾಗಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ನಿಮಗಿರುವ ಸಂಶಯಗಳ ಬಗ್ಗೆ ಎಲ್ಲಾ ಮಾಹಿತಿ ನೀಡಿ, ನಾವು ಉತ್ತರ ಕೊಡುತ್ತೇವೆ ಎಂದು ತಿಳಿಸಿರುವುದಾಗಿ ಹೇಳಿದರು.
ಸಿದ್ದರಾಮಯ್ಯ ಅವರು ಅವರ ಅಧಿಕಾರದ ಅವಧಿಯಲ್ಲಿನ ಇಂದಿರಾ ಕ್ಯಾಂಟಿನ್ಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆಯವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಉತ್ತರವನ್ನು ನೀಡುತ್ತಿಲ್ಲ. ಇದೀಗ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದರು. (ಕೆಸಿಐ,ಎಸ್.ಎಚ್)