ಮೈಸೂರು

ಚಾಮುಂಡಿ ಬೆಟ್ಟದಲ್ಲಿಂದು ತಾಯಿ ಚಾಮುಂಡೇಶ್ವರಿಗೆ ವರ್ಧಂತಿ ಮಹೋತ್ಸವ : ತಾಯಿಯ ದರ್ಶನ ಪಡೆದ ಮೈಸೂರು ರಾಜವಂಶಸ್ಥ ಯದುವೀರ್ ದಂಪತಿ

ಮೈಸೂರು,ಜು.13:- ಚಾಮುಂಡಿ ಬೆಟ್ಟದಲ್ಲಿಂದು ತಾಯಿ ಚಾಮುಂಡೇಶ್ವರಿಗೆ ವರ್ಧಂತಿ ಮಹೋತ್ಸವ ನಡೆಯಿತು. ಪ್ರತಿವರ್ಷದಂತೆ ಈ ವರ್ಷವೂ  ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳು ನಡೆದವು.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವವು ಆಷಾಢ ಮಾಸದ ಕೃಷ್ಣಪಕ್ಷದ ಸಪ್ತಮಿಯಂದು ನಡೆಯಲಿದೆ. ಇಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಭ್ಯಂಜನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ನಡೆಸಲಾಯಿತು. ದೇವಾಲಯದ ಪ್ರಾಕಾರದಲ್ಲಿಯೇ ದರ್ಬಾರ್ ಉತ್ಸವ ನಡೆದಿದ್ದು, ಇದರಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಧರ್ಮಪತ್ನಿ ತ್ರಿಷಿಕಾಕುಮಾರಿ ಒಡೆಯರ್ ಜೊತೆ ಪಾಲ್ಗೊಂಡು ತಾಯಿಯ ದರ್ಶನ ಪಡೆದರು. ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ ನೇತೃತ್ವದಲ್ಲಿ ಪೂಜೆ ನೆರವೇರಿತು.

ಈ ಸಂದರ್ಭ ಮಾತನಾಡಿದ ಯದುವೀರ್ ಪ್ರತಿ ವರ್ಷದಂತೆ ಈ ವರ್ಷ ವರ್ಧಂತ್ಯೋತ್ಸವ ಆಚರಣೆ ಮಾಡಿದ್ದೇವೆ. ಕೊರೋನಾ ಹಿನ್ನಲೆಯಲ್ಲಿ ತಾಯಿಯ ಆಶೀರ್ವಾದ ಎಲ್ಲರ ಮೇಲಿರಲಿ. ಆದಷ್ಟು ಬೇಗ ಕೊರೋನಾದಿಂದ ಜನ ಸುಧಾರಣೆ ಕಾಣಲಿ. ಸರ್ಕಾರದ ಕೊರೋನಾ ಸುರಕ್ಷಾ ದೃಷ್ಟಿಯಿಂದ  ಈ ಬಾರಿ ಮುನ್ನೆಚ್ಚರಿಕಾ ಕ್ರಮದೊಂದಿಗೆ ವರ್ಧಂತಿ ಆಚರಣೆ ಮಾಡಿದ್ದೇವೆ. ನಮ್ಮೆರಡು ಪೀಳಿಗೆ ಈ ರೀತಿಯ ಕಷ್ಟಗಳನ್ನು ಅನುಭವಿಸಿರಲಿಲ್ಲ.ಈಗ ಕಷ್ಟ ಬಂದಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕಿದೆ. ಸರ್ಕಾರದ ಕ್ರಮಗಳನ್ನು ಎಲ್ಲರೂ ಪಾಲಿಸುವ ಮೂಲಕ ಕೊರೋನಾ ದೂರ ಮಾಡೋಣ ಎಂದರು.

ಜಿಲ್ಲಾಡಳಿತದ ಸೂಚನೆಯಂತೆ, ಆಷಾಢ ಶುಕ್ರವಾರ, ವರ್ಧಂತಿ ಮಹೋತ್ಸವ ಮತ್ತು ನಾಳೆ ಅಂದರೆ ಮಂಗಳವಾರ ಕೂಡ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: