ಪ್ರಮುಖ ಸುದ್ದಿ

ಕೋವಿಡ್ ವ್ಯವಸ್ಥೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿ : ಸಚಿವ ಎಸ್ ಟಿ ಸೋಮಶೇಖರ್

ರಾಜ್ಯ(ಬೆಂಗಳೂರು)ಜು.13:-  ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಹಲವು ವೈದ್ಯಕೀಯ ಕಾಲೇಜಿನಲ್ಲಿ 2250 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಈ ಹಾಸಿಗೆಗಳನ್ನು ಈ ವ್ಯಾಪ್ತಿಗೇ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರೂ ಸಹ ಒಪ್ಪಿಗೆ ನೀಡಿದ್ದಾರೆ. ಈ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡಬೇಕಿದೆ ಎಂದು ಸಹಕಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜರಾಜಶ್ವರಿ ನಗರ ವಲಯ ಉಸ್ತುವಾರಿಗಳಾದ  ಎಸ್.ಟಿ.ಸೋಮಶೇಖರ್ ತಿಳಿಸಿದರು.

ಅವರು ಅಂಬೇಡ್ಕರ್ ಕಾಲೇಜಿನಲ್ಲಿಂದು ನಡೆದ  ರಾಜರಾಜೇಶ್ವರಿ ನಗರ ವಲಯದ ಲಗ್ಗೆರೆ ಉಪ ವಿಭಾಗ ವ್ಯಾಪ್ತಿಯ ಕಾರ್ಪೋರೇಟರ್ ಗಳ ಸಭೆಯಲ್ಲಿ ಮಾತನಾಡಿದರು. ವೈದ್ಯರು, ನರ್ಸ್ ಗಳು ಹಾಗೂ ಡಿ ಗ್ರೂಪ್ ನೌಕರರಿಗೆ ಯಾವುದೇ ಸಮಸ್ಯೆ ಆಗದಿರಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಆಯಾ ಕಾರ್ಪೊರೇಟರ್ ಗಳು ಸೇರಿದಂತೆ ಅಧಿಕಾರಿಗಳು, ಜೆಸಿಗಳು ಹಾಗೂ ಜನಪ್ರತಿನಿಧಿಗಳ ಸಂಪರ್ಕ ಸಂಖ್ಯೆ ಕೊಡಲು ಪಾಂಪ್ಲೆಟ್ ಮಾಡಿ ಕೊಡುವ ಕೆಲಸವನ್ನು ಪ್ರಾರಂಭಿಸಬೇಕು. ಇದನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಪಾಲಿಕೆ ಸದಸ್ಯರು ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಇಂಜಿನಿಯರ್ ಗಳನ್ನು ಈ ವ್ಯಾಪ್ತಿಯಲ್ಲೇ ಬಳಸಿಕೊಳ್ಳುವ ಕೆಲಸ ಆಗಬೇಕು. ಅವರನ್ನು ಏರ್ಪೋರ್ಟ್ ಕೆಲಸಗಳಿಗೆ ನಿಯೋಜಿಸುವ ಕೆಲಸವನ್ನು ಸದ್ಯಕ್ಕೆ ಮಾಡಬಾರದು ಎಂದು ಸಚಿವರು ತಿಳಿಸಿದರು.

ಜನರಿಗೆ ಧೈರ್ಯ ನೀಡುವ ಕೆಲಸ ಮಾಡಬೇಕು. ಸರ್ಕಾರ ನಿಮ್ಮ ಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಜನರ ಗಮನಕ್ಕೆ ತರುವ ಕೆಲಸ ಮಾಡಬೇಕು. ಜೊತೆಗೆ ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಸ್ಯಾನಿಟೈಸೇಶನ್ ಮಾಡಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು ಎಂಬ ಬಗ್ಗೆ ಮಾಹಿತಿ ಕೊಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಮರ್ಪಕವಾಗಿ ವ್ಯವಸ್ಥೆ ಮಾಡಬೇಕು. ಈ ಸಂದರ್ಭದಲ್ಲಿ ಯಾರಾದರೂ ಸಮರ್ಪಕವಾಗಿ ಸ್ಪಂದನೆ ಮಾಡದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಆದರೆ, ಅದಕ್ಕಿಂತ ಮೊದಲು ಆದಷ್ಟು ಅಂತಹ ಖಾಸಗಿ ಆಸ್ಪತ್ರೆಗಳ ಜೊತೆ ಮಾತನಾಡಿ ಕನಿಷ್ಠಪಕ್ಷ ಮೂರ್ನಾಲ್ಕು ಬಾರಿ ಮನವಿ ಮಾಡಿಕೊಳ್ಳಿ, ಆದರೂ ಕೇಳದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಹಾಗೂ ರಾಜರಾಜೇಶ್ವರಿ ನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥರಾದ ವಿಶಾಲ್, ಬಿಬಿಎಂಪಿ ಅಧಿಕಾರಿಗಳು, ವಿವಿಧ ಸ್ವಯಂ ಸೇವಕ ಸಂಘಟನೆಗಳ ಪದಾಧಿಕಾರಿಗಳು ಇದ್ದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: