ಪ್ರಮುಖ ಸುದ್ದಿ

ಕೋವಿಡ್ ತುರ್ತು ಚಿಕಿತ್ಸೆಗೆ ಕ್ರಮವಹಿಸಿ  :  ಸಚಿವ ಎಸ್ ಟಿ ಸೋಮಶೇಖರ್ ಸೂಚನೆ

 ರಾಜರಾಜೇಶ್ವರಿ ನಗರ ವಲಯದ ಲಕ್ಷ್ಮೀದೇವಿನಗರ ಉಪ ವಿಭಾಗ ವ್ಯಾಪ್ತಿಯ ಕಾರ್ಪೋರೇಟರ್ ಗಳ ಸಭೆ

ರಾಜ್ಯ( ಬೆಂಗಳೂರು)ಜು.13:-  ಸಹಕಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜರಾಜಶ್ವರಿ ನಗರ ವಲಯ ಉಸ್ತುವಾರಿಗಳಾದ  ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಕೋವಿಡ್ 19 ನಿಯಂತ್ರಣ ಸಂಬಂಧ ರಾಜರಾಜೇಶ್ವರಿ ನಗರ ವಲಯದ ಲಕ್ಷ್ಮೀದೇವಿನಗರ ಉಪ ವಿಭಾಗ ವ್ಯಾಪ್ತಿಯ ಕಾರ್ಪೋರೇಟರ್ ಗಳ ಸಭೆ ನಡೆಯಿತು.

ಇಲ್ಲಿನ ಸುರಾನಾ ಕಾಲೇಜಿನಲ್ಲಿ ಸಭೆ ನಡೆದಿದ್ದು, ಐಎಎಸ್ ಅಧಿಕಾರಿ ಹಾಗೂ ರಾಜರಾಜೇಶ್ವರಿ ನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥರಾದ ವಿಶಾಲ್ ಉಪಸ್ಥಿತರಿದ್ದರು.

ಪಾಸಿಟಿವ್ ಪ್ರಕರಣಗಳು ಬಂದಾಗ  ಬಿಯು ನಂಬರ್ ಇದ್ದರೆ ಮಾತ್ರ ಆ್ಯಂಬುಲೆನ್ಸ್ ಬರುವ ವ್ಯವಸ್ಥೆ ಇದೆ. ಹೀಗೆ ಬಿಯು ನಂಬರ್ ಸಿಗುವುದು ವಿಳಂಬ ಆದಾಗ ಜನ ಭಯಗೊಳ್ಳುತ್ತಾರೆ. ಹೀಗಾಗಿ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಅವರಿಗೆ ತುರ್ತು ಚಿಕಿತ್ಸೆಗಾಗಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡುವುದರ ಜೊತೆಗೆ ಪ್ರತ್ಯೇಕ ವಾಹನದ ವ್ಯವಸ್ಥೆಯನ್ನೂ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಯಿತು.

ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾದವರು ಮನೆಯಲ್ಲೇ ಕ್ವಾರೆಂಟೇನ್ ಆದರೆ ಅಂಥವರ ಮೇಲೆ ನಿಗಾ ವಹಿಸಲು ಪ್ರತ್ಯೇಕವಾಗಿ ಕ್ಯಾಮೆರಾ ಇಡಲು ಆಗುವುದಿಲ್ಲ. ಹೀಗಾಗಿ ಮನೆಯ ಅಕ್ಕಪಕ್ಕದವರೇ ಕ್ಯಾಮೆರಾಗಳಂತೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಪಾಸಿಟಿವ್ ಕೇಸ್ ಹೊಂದಿರುವ ಮನೆಯವರು ಹೊರಗೆ ಬಂದರೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸುವಂತಹ ಕೆಲಸ ಮಾಡುವಂತೆ ಮನವೊಲಿಸಬೇಕು. ಜೊತೆಗೆ ಮಾಹಿತಿಯನ್ನು ಕೊಡಬೇಕು ಎಂದು ತಿಳಿಸಲಾಯಿತು.

ಕೆಲವು ವೈದ್ಯಾಧಿಕಾರಿಗಳಿಗೆ ಸಿಬ್ಬಂದಿ ಇದ್ದರೂ ವಾಹನಗಳ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ವಾಹನಗಳಿಗೋಸ್ಕರ ಬೇಡಿಕೆ ಇಟ್ಟರೆ ಪೂರೈಸಲಾಗುವುದು ಎಂದು ವಿಶಾಲ್ ಅವರು ತಿಳಿಸಿದರು.

ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ತಕ್ಷಣ ಸ್ಪಂದಿಸಿ ಅವರಿಗೆ ಧೈರ್ಯ ನೀಡುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎನ್ ಜಿ ಒ ಗಳ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: