ಪ್ರಮುಖ ಸುದ್ದಿ

ಕೋವಿಡ್ ವಿರುದ್ಧ ಅಖಾಡಕ್ಕಿಳಿದು ಕೆಲಸ ಮಾಡುತ್ತೇವೆ ; ಸಚಿವ ಎಸ್ ಟಿ ಸೋಮಶೇಖರ್

  ಯಶವಂತಪುರ ಉಪವಿಭಾಗ ವ್ಯಾಪ್ತಿಯ ಕಾರ್ಪೋರೇಟರ್ ಗಳ ಸಭೆ

ರಾಜ್ಯ(ಬೆಂಗಳೂರು)ಜು.13:-  ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹಾಗಾಗಿ ಕಾಟಾಚಾರಕ್ಕೆ ಕೆಲಸ ಮಾಡದೇ ನಾವೂ ಸಹ ಅಖಾಡಕ್ಕಿಳಿದು ಕೆಲಸ ಮಾಡುತ್ತೇವೆ. ಹೀಗಾಗಿ ಇನ್ನು 2-3 ತಿಂಗಳು ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲೇ ಸಂಚರಿಸಿ ಕಾರ್ಯನಿರ್ವಹಣೆ ಮಾಡುವೆ ಎಂದು ಎಂದು ಸಹಕಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜರಾಜಶ್ವರಿ ನಗರ ವಲಯ ಉಸ್ತುವಾರಿಗಳಾದ  ಎಸ್.ಟಿ.ಸೋಮಶೇಖರ್ ತಿಳಿಸಿದರು.

ಅವರು ಮುತ್ಯಾಲ ನಗರದ ಸಾಯಿಬಾಬ ಧ್ಯಾನ ಮಂದಿರ ಆವರಣದಲ್ಲಿ ಏರ್ಪಡಿಸಲಾಗಿದ್ದ ಯಶವಂತಪುರ ಉಪವಿಭಾಗ ವ್ಯಾಪ್ತಿಯ ಕಾರ್ಪೋರೇಟರ್ ಗಳ ಸಭೆಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿಗಳು ಒಂದೊಂದು ಝೋನ್ ಒಬ್ಬ ಉಸ್ತುವಾರಿ ಮಂತ್ರಿ ಹಾಗೂ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರದ ಝೋನ್ ಗಳಿಗೆ ಉಸ್ತುವಾರಿಯನ್ನಾಗಿ ನನ್ನನ್ನು ಹಾಗೂ ಐಎಎಸ್ ಅಧಿಕಾರಿ ವಿಶಾಲ್ ಅವರನ್ನು ನೇಮಕ ಮಾಡಿದ್ದು, ಇಬ್ಬರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ. ಈಗಾಗಲೇ ಝೋನ್ ಗಳಾಗಿ ವಿಂಗಡಿಸಿ ಪ್ರತ್ಯೇಕ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ತಕ್ಷಣ ಕೊರೋನಾ ವರದಿ ನೀಡುವ ಕಿಟ್ ಬಂದಿದ್ದು, ಪತ್ತೆ ಕಾರ್ಯವೂ ಸುಲಭವಾಗಲಿದೆ. ಇನ್ನು ಸೋಂಕು ಲಕ್ಷಣಗಳು ಕಂಡರೆ, ಸೋಂಕು ಪತ್ತೆಯಾದರೆ ಯಾವ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಮೊಬೈಲ್ ಸಂಖ್ಯೆಯುಳ್ಳ ಪಾಂಪ್ಲೆಟ್ ಅನ್ನು ನೀಡಲಾಗುವುದು ಎಂದು ತಿಳಿಸಿದರು.

ಇನ್ನೊಂದೆಡೆ ಕೋವಿಡ್ ನಿಯಂತ್ರಣ ಮಾಡಬೇಕಾದಲ್ಲಿ ಸಾರ್ವಜನಿಕರ ಸಹಕಾರ ಕೂಡಾ ಅಗತ್ಯವಿದೆ. ಅಲ್ಲದೆ, 10 ಜನರ ಸಮಿತಿ ಇದ್ದು, ಅವರೂ ಸಹ ಸಮರೋಪಾದಿಯಲ್ಲಿ ಕೆಲಸ ಮಾಡಲಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಝೋನ್ ಬಿಟ್ಟು ವಾರ್ಡ್ ವಾರು, ಪ್ರತಿ ಬೀಡಿಗಳಿಗೆ ಓಡಾಟ ನಡೆಸಿ ಕಾರ್ಯನಿರ್ವಹಿಸುತ್ತೇನೆ ಎಂದು ಸಚಿವರು ಹೇಳಿದರು.

ಐಎಎಸ್ ಅಧಿಕಾರಿ ಹಾಗೂ ರಾಜರಾಜೇಶ್ವರಿ ನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥರಾದ ವಿಶಾಲ್, ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎನ್ ಜಿ ಒ ಗಳ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು. ( ಜಿ.ಕೆ,ಎಸ್.ಎಚ್)

Leave a Reply

comments

Related Articles

error: