ಮೈಸೂರು

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹುಟ್ಟುಹಬ್ಬ ಆಚರಣೆ

ಮೈಸೂರು, ಜು.13:-ನಗರದ ಕನ್ನೇಗೌಡ ಟೈಗರ್ಸ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಂಘದ ಸಂಯುಕ್ತಾಶ್ರಯದಲ್ಲಿ ಶಿವರಾಜ್‍ಕುಮಾರ್ ಅವರ 58ನೇ ಜನ್ಮದಿನವನ್ನು ಡಾ.ರಾಜ್‍ಕುಮಾರ್ ಪ್ರತಿಮೆಯ ಉದ್ಯಾನವನದಲ್ಲಿ ಸರಳವಾಗಿ ಇಂದು (ಜು.13) ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಡಾ.ರಾಜ್‍ಕುಮಾರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಚಾಲನೆ ನೀಡಿದ ಅಖಿಲ ಕರ್ನಾಟಕ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕ-ಅಧ್ಯಕ್ಷರಾದ ಎಂ.ರಾಮೇಗೌಡರು ನಗರದ ಆಟೋ ಹಾಗೂ ಟ್ಯಾಕ್ಸಿ ಚಾಲಕರುಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಿ, ಮಾತನಾಡಿ, ಬದುಕಿನಲ್ಲಿ ನಾವು ನಮ್ಮ ಕೈಲಾದ ಸಹಾಯ, ಸಹಕಾರವನ್ನು ಎಲ್ಲ ಸಮುದಾಯಕ್ಕೆ, ನೆರೆಹೊರೆಯವರಿಗೆ ಸ್ವಾರ್ಥ ಪರವಾದ ಉದ್ದೇಶವನ್ನು ಬಿಟ್ಟು, ಸಹಾಯ ಮಾಡಿ, ನಿಸ್ವಾರ್ಥತೆಯಿಂದ, ಸೇವಾ ಮನೋಭಾವದಿಂದ ಸಹಾಯ, ಸಹಕಾರವನ್ನು ನೀಡಬೇಕೆಂದು ತಿಳಿಸಿದರು.
ಕನ್ನಡಿಗರಾದ ನಾವು ಸ್ವಾಭಿಮಾನಿಗಳು. ಕನ್ನಡದ ನೆಲ, ಜಲ, ಭಾಷೆ ವಿಚಾರ ಬಂದಾಗ ಒಗ್ಗಟ್ಟಿನಿಂದ ಕೈಜೋಡಿಸಿ, ಒಂದಾಗಿ ಈ ನಾಡನ್ನು ರಕ್ಷಿಸಿ, ಪೋಷಿಸಬೇಕೆಂದು ತಿಳಿಸಿದ ಅವರು, ಇಂದು ನಾವು ಕೋವಿಡ್-19 ಕೊರೊನಾ ಸಾಂಕ್ರಾಮಿಕ ಮಹಾಮಾರಿ ರೋಗದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದ ಬದುಕನ್ನು ನಡೆಸುತ್ತಿದ್ದೇವೆ. ಇಂತಹ ಕಷ್ಟಕರ ಬದುಕಿನ ಸಂದರ್ಭದಲ್ಲಿ ಉಳ್ಳವರು ಅವಶ್ಯಕತೆ ಇರುವವರಿಗೆ ಸಹಾಯ ಹಸ್ತವನ್ನು ನೀಡಿ ಹೃದಯ ವೈಶಾಲ್ಯತೆಯನ್ನು ತೋರಿಸಬೇಕೆಂದು ತಿಳಿಸಿ, ಜೀವನಕ್ಕಿಂತ ಜೀವ ಈ ಸಮಯದಲ್ಲಿ ಬಹಳ ಮುಖ್ಯ. ಆದ್ದರಿಂದ ಯಾರೂ ಕೂಡ ದೃತಿಗೆಡದೆ, ಧೈರ್ಯದೊಂದಿಗೆ ಆತ್ಮವಿಶ್ವಾಸವನ್ನಿಟ್ಟು ಬದುಕನ್ನು ನಡೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನೇಗೌಡ ಟೈಗರ್ಸ್‍ನ ಯುವ ಮುಖಂಡ ರಾಕೇಶ್, ಶಿವರಾಜ್‍ಕುಮಾರ್ ಸಂಘದ ಅಭಿಮಾನಿಗಳಾದ ಸಿ.ಕೃಷ್ಣ, ಭೀಮ ಉಪಸ್ಥಿತರಿದ್ದರು. ನಂತರ ನೆರೆದಿದ್ದ ಅಭಿಮಾನಿ ಬಳಗಕ್ಕೆ ಸಿಹಿ ವಿತರಿಸಿ, ಸಂಭ್ರಮಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: