ಪ್ರಮುಖ ಸುದ್ದಿ

ಇಂದಿನಿಂದ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ವ್ಯವಹಾರಕ್ಕೆ ಅವಕಾಶ

ರಾಜ್ಯ( ಮಡಿಕೇರಿ) ಜು.15 :- ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಕೊಡಗು ಜಿಲ್ಲೆಯಾದ್ಯಂತ ಜುಲೈ 15 ರಿಂದ ಬೆಳಗ್ಗೆ 6 ಗಂಟೆಯಿಂದ ಜುಲೈ 31 ರ ಮಧ್ಯರಾತ್ರಿಯವರೆಗೆ ಕಂಟೈನ್‍ಮೆಂಟ್ ವಲಯಗಳಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಕಂಟೈನ್‍ಮೆಂಟ್ ಹೊರತಾದ ಪ್ರದೇಶಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಯಂತೆ ನಡೆಸಲು ಅನುಮತಿಸಲಾಗಿರುವ ಚಟುವಟಿಕೆಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ನಡೆಸುವುದು.
ವಾರದ ಎಲ್ಲಾ ದಿನಗಳಲ್ಲಿ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶನಿವಾರ ಮತ್ತು ಭಾನುವಾರಗಳು ಪೂರ್ಣ ದಿನ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ದಿನಗಳಲ್ಲಿ ತುರ್ತು, ವೈದ್ಯಕೀಯ ಮತ್ತು ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಚಟುವಟಿಕೆಗಳಿಗೆ ಮತ್ತು ವ್ಯಕ್ತಿಗಳ ಅನಗತ್ಯ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಕರ್ಫ್ಯೂ ಅವಧಿಯಲ್ಲಿ ತುರ್ತು ಮತ್ತು ಅತ್ಯವಶ್ಯಕ ಸೇವೆಗಳನ್ನು ನೀಡುವ ಇಲಾಖೆ, ಕಚೇರಿ, ನಿಗಮ ಮಂಡಳಿ, ಬೋರ್ಡ್ ಇತ್ಯಾದಿಗಳು, ಸರಕು ಸಾಗಾಣಿಕೆ, ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ, ಉಳಿದಂತೆ ಯಾವುದೇ ಚಟುವಟಿಕೆಗಳಿಗೆ ಮತ್ತು ವ್ಯಕ್ತಿಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: