ಮೈಸೂರು

ಶೈಕ್ಷಣಿಕ ದ್ವಂದ್ವಗಳ ನಡುವೆಯೂ ಯುವಕರು ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿರುವುದು ಶ್ಲಾಘನೀಯ : ಪ್ರೊ.ದಯಾನಂದ ಮಾನೆ ಅಭಿಮತ

ಸಮಾಜದಲ್ಲಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ದ್ವಂದ್ವಗಳ ನಡುವೆಯೂ ಯುವಕರು ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿರುವುದು ಶ್ಲಾಘನೀಯ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಅಭಿಪ್ರಾಯಪಟ್ಟರು.

ಮಂಗಳವಾರ ಭಾರತ ಸರ್ಕಾರದ ಯುವ ಮತ್ತು ಕ್ರೀಡಾ ಸಚಿವಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ 2015-16ನೇ ಸಾಲಿನ ರಾಷ್ಟ್ರೀಯ ಯುವ ಮುಖಂಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಕೀರ್ತಿಯನ್ನು ಹೆಚ್ಚಿಸುವಲ್ಲಿ ಯುವಜನತೆಯ ಶ್ರಮ ಬಹಳಷ್ಟಿದೆ. ಕ್ರೀಡಾಕ್ಷೇತ್ರದಲ್ಲಿನ ರಾಜಕೀಯವನ್ನು ಲೆಕ್ಕಿಸದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಸಾಧನೆ ಕಡಿಮೆಯಿದ್ದರೂ, ಯುವಕರಲ್ಲಿನ ಹಿಮಾಲಯದಂತಹ ಹೆಮ್ಮೆಯ ಭರವಸೆ ಮೆಚ್ಚುವಂತಹದ್ದು ಎಂದು ಹೇಳಿದರು.

ಸಮಾಜದಲ್ಲಿ ಹಿಂದುಳಿದವರಾಗಿ ಅವಕಾಶಗಳಿಂದ ವಂಚಿತರಾಗಿದ್ದ ನೀಗ್ರೋ ಜನಾಂಗ ಇಂದು ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದೆ. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡು ಎತ್ತರಕ್ಕೆ ಏರುತ್ತಿದ್ದಾರೆ. ಅವರಲ್ಲಿ ಗೆಲ್ಲಲೇಬೇಕೆಂಬ ಕಿಚ್ಚಿದೆ. ಅಂತಹ ಕಿಚ್ಚು, ಛಲ ನಮ್ಮ ಯುವಕರಲ್ಲೂ ಮೂಡಬೇಕು. ಶ್ರದ್ಧೆಯಿಂದ, ಸಮರ್ಪಣಾ ಭಾವದಿಂದ ಗುರಿ ಸಾಧನೆಯೆಡೆಗೆ ಮುನ್ನುಗ್ಗಬೇಕು. ಆಗ ಮಾತ್ರ ಯಶಸ್ಸು ನಮ್ಮದಾಗಲು ಸಾಧ್ಯ. ಇಂದು ನೂರಾರು ಗ್ರಾಮೀಣ ಪ್ರತಿಭೆಗಳು ಹಣಕಾಸಿನ ಕೊರತೆಯಿಂದಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಪ್ರತಿಭಾವಂತರಿಗೆ ಸಹಾಯಹಸ್ತ ಚಾಚುವ ಮೂಲಕ ದೇಶದ ಘನತೆಯನ್ನು ಮತ್ತಷ್ಟು ಏರಿಸಬೇಕು ಎಂದು ಹೇಳಿದರು.

ಇದೇ ವೇಳೆ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ, ಸಿದ್ಧಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ತೃತೀಯ ಹಾಗೂ ಯುವರಾಜ ಕಾಲೇಜು 4ನೇ ಸ್ಥಾನ ಪಡೆದುಕೊಂಡವು. ಪ್ರಥಮ ಬಹುಮಾನವಾಗಿ 40 ಸಾವಿರ, ದ್ವಿತೀಯ 35 ಸಾವಿರ, ತೃತೀಯ 30 ಸಾವಿರ ಹಾಗೂ 4ನೇ ಬಹುಮಾನವಾಗಿ 25 ಸಾವಿರ ರೂ.ನಗದು ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಮಹೇಶಾತ್ಮಾನಂದಜೀ ಮಹಾರಾಜ್, ಅಂತಾರಾಷ್ಟ್ರೀಯ ಅಥ್ಲಿಟ್ ಅರ್ಜುನ್ ದೇವಯ್ಯ, ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ, ಬೆಂಗಳೂರಿನ ಎನ್‍ಎಸ್‍ಎಸ್ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಅರ್ಜುನ್ ಎನ್ ಪೂಜಾರ್, ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  (ಬಿ.ಎಂ-ಎಸ್.ಎಚ್)

Leave a Reply

comments

Related Articles

error: