ಮೈಸೂರು

ಅಂಬೇಡ್ಕರ್ ನಿವಾಸ ರಾಜಗೃಹದ ಮೇಲಿನ ದಾಳಿ, ಪೆಟ್ರೋಲ್ ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಮೈಸೂರು,ಜು.15:- ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ವಯಂ ನಿರ್ಮಿತ ‘ರಾಜಗೃಹ’ ನಿವಾಸದ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿ ಖಂಡಿಸಿ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ  ವತಿಯಿಂದ ಪ್ರತಿಭಟನೆ ನಡೆಯಿತು,

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿ ನಿರ್ಮಿಸಿದ್ದ ರಾಜಗೃಹ ನಿವಾಸವು ಇಡೀ ಭಾರತೀಯರ ಹೆಮ್ಮೆಯ ಸಂಕೇತವಾಗಿದೆ.  ಶೋಷಿತ ಭಾರತೀಯರಿಗೆ ಬಾಬಾ ಸಾಹೇಬರ ನಿವಾಸವು ಅತ್ಯಂತ ಹೆಮ್ಮೆಯ ಮತ್ತು ಗೌರವದ ಸಂಕೇತವಾದ ಕಾರಣ ದೇಶ ವಿದೇಶಗಳಿಂದ ಬರುವ ಅವರ ಅನುಯಾಯಿಗಳು ರಾಜಗೃಹ ನಿವಾಸವನ್ನು ನೋಡಿ ಜನ್ಮ ಸಾರ್ಥಕ ಮಾಡಿಕೊಳ್ಳುತ್ತಾರೆ. ಇದೊಂದು ರಾಷ್ಟ್ರೀಯ ಸ್ಮಾರಕವಾಗಿ ಇಂದು ಗೌರವಕ್ಕೆ ಪಾತ್ರವಾಗಿದೆ. ಹೀಗಿರುವಾಗ ಆಳುವ ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳ ಮನುವಾದಿ ಧೋರಣೆಯಿಂದ ಇಂದು ಕಿಡಿಗೇಡಿಗಳ ಕೆಂಗಣ್ಣಿಗೆ ರಾಜಗೃಹ ನಿವಾಸವು ಬಲಿಯಾಗುತ್ತಿದೆ. ಅದರ ಮೇಲೆ ದಾಳಿ ನಡೆದು ಸಾಕಷ್ಟು ದಿನಗಳೇ ಕಳೆದಿದ್ದರೂ ಈವರೆಗೂ ಕೇಂದ್ರ ರಾಜ್ಯ ಸರ್ಕಾರಗಳು ದಾಳಿಕೋರರನ್ನು ಬಂಧಿಸದೇ ಇರುವುದು   ಮನುವಾದಿ ಬುದ್ಧಿಗೆ    ಸಾಕ್ಷಿಯಾಗಿದೆ. ಈ ಮನುವಾದಿ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದರು.

ಕೋವಿಡ್-19 ವೈರಸ್ ದಾಳಿಗೆ ತುತ್ತಾಗಿ ಇಡೀ ದೇಶವೇ ಕಂಗಾಲಾಗಿ ಲಾಕ್ ಡೌನ್ ಸೀಲ್ ಡೌನ್ ಮೂಲಕ ಗೇಹಬಂಧನದಲ್ಲಿ ಇರುವಂತಹ ಈ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರವು ಹಗಲು ದರೋಡೆಗೆ ಇಳಿದಿರುವುದು ಸಾಬೀತಾಗಿದೆ. ಜನತೆ ಯಾವ ಪ್ರತಿಭಟನೆಯನ್ನೂ ಮಾಡದ ಇಂತಹ ಸಂದಿಗ್ಧ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ದುಪ್ಪಟ್ಟು ಮಾಡಿ ಜನತೆಯ ಮೇಲೆ ನೇರ ಆರ್ಥಿಕ ದೌರ್ಜನ್ಯ ಮಾಡಿರುವುದು ಖಂಡಿಸುತ್ತೇವೆ ಎಂದರು. ಅಂಬೇಡ್ಕರ್ ರಾಜಗೃಹ ನಿವಾದ ಮೇಲೆ ದಾಲಿ ನಡೆಸಿದ ದಾಳಿಕೋರರ ಮತ್ತು ಕುಮ್ಮಕ್ಕು ನೀಡಿದ ಎಲ್ಲಾ ಕಿಡಿಗೇಡಿಗಳನ್ನು ಬಂಧಿಸಿ , ದೇಶ ದ್ರೋಹದ ಪ್ರಕರಣ ದಾಖಲಿಸಿ ಗಡಿಪಾರುಮಾಡುವಂತೆ ಒತ್ತಾಯಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಿಸಿ ಕನಿಷ್ಟ 50ರೂ.ಗಳಿಗೆ ಮಾರಾಟ ಮಾಡುವಂತೆಯೂ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: