ಪ್ರಮುಖ ಸುದ್ದಿ

ಬ್ಯಾಡಗಿ ಮೆಣಸಿನ ಗುಣಮಟ್ಟ ಪರೀಕ್ಷೆಗೆ ಲ್ಯಾಬ್ ; ಸಚಿವ ಎಸ್ ಟಿ ಸೋಮಶೇಖರ್  ಘೋಷಣೆ

ರಾಜ್ಯ( ಹಾವೇರಿ)ಜು.15:-  ರಾಜ್ಯವಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬ್ಯಾಡಗಿ ಮೆಣಸಿನಕಾಯಿಗೆ ಅದರದ್ದೇ ಆದ ವಿಶೇಷತೆ ಇದೆ. ಇದಕ್ಕೆ ಇನ್ನಷ್ಟು ಮನ್ನಣೆ ಸಿಗುವುದರ ಜೊತೆಗೆ ರೈತರಿಗೂ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಬ್ಯಾಡಗಿಯ ಮೆಣಸಿನ ಕಾಯಿ ಮಾರುಕಟ್ಟೆಗೆ ಒಂದು ಪ್ರಯೋಗಾಲಯ (ಲ್ಯಾಬೋರೇಟರಿ) ವನ್ನು ಮಂಜೂರು ಮಾಡಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಬ್ಯಾಡಗಿ ಮೆಣಸಿನಕಾಯಿ ಪರೀಕ್ಷೆಗೆಂದು ಲ್ಯಾಬೋರೇಟರಿಯನ್ನು ಮಾಡುವುದರಿಂದ ಮೆಣಸಿನ ಕಾಯಿ ಗುಣಮಟ್ಟವನ್ನು ಇಲ್ಲಿಯೇ ಪರೀಕ್ಷಿಸಲು ಅನುಕೂಲವಾಗಲಿದೆ. ಇದು ರೈತರ ಹಿತದೃಷ್ಟಿಯಿಂದ ಸಹಕಾರಿ. ಇನ್ನು ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯ ಮೂಲಸೌಲಭ್ಯಕ್ಕೆ ಈಗಾಗಲೇ 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಸಚಿವರು ತಿಳಿಸಿದರು.

ಎಪಿಎಂಸಿಗೆ 800 ಸಿಬ್ಬಂದಿ ನೇಮಕ

ರಾಜ್ಯದಲ್ಲಿ ಎಪಿಎಂಸಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಇದಕ್ಕಾಗಿ ರಾಜ್ಯಾದ್ಯಂತ ಸುಮಾರು 800 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರೈತರಿಗೆ ನಮ್ಮ ಬೆಳೆ ನಮ್ಮ ಹಕ್ಕು ಅಧಿಕಾರ

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೇ ಅನುಕೂಲವಾಗಿದೆ. ಇದು ಕೇಂದ್ರ ಸರ್ಕಾರ ಉತ್ತಮ ಯೋಜನೆಯಾಗಿದೆ. ರೈತ ತಾನು ಬೆಳೆದ ಬೆಳೆಯನ್ನು ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಮುಕ್ತ ಹಕ್ಕನ್ನು ಹೊಂದಿದ್ದು, ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಈ ಮೂಲಕ ನಮ್ಮ ಬೆಳೆ ನಮ್ಮ ಹಕ್ಕು ಎಂಬುದು ರೈತರ ಮಂತ್ರವಾಗಿದೆ. ಅವರ ಬೆಳೆಗಳಿಗೆ ಅವರೇ ಬೆಲೆಯನ್ನು ನಿರ್ಧರಿಸುವ ಕಾಲ ಈಗ ಬಂದಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಸಿದ್ದರಾಮಯ್ಯ, ಶಿವಕುಮಾರ್ ಅವರಿಗೇ ಹೊಂದಾಣಿಕೆ ಇಲ್ಲ

ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಹೊಂದಾಣಿಕೆ ಇಲ್ಲ ಎಂಬ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ನಿರಾಕರಿಸಿದ ಸಚಿವ ಸೋಮಶೇಖರ್, ಮೊದಲು ಅವರಿಬ್ಬರ ನಡುವೆಯೇ ಹೊಂದಾಣಿಕೆ ಇಲ್ಲ. ನಮ್ಮ ಪಕ್ಷದ ಬಗ್ಗೆ ಸುಮ್ಮನೆ ಮಾತನಾಡುತ್ತಾರೆ. ನಾವೆಲ್ಲರೂ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಕೇವಲ ಪ್ರಚಾರಕ್ಕಾಗಿ ಅವರು ಜನರ ದಿಕ್ಕನ್ನು ಬೇರೆ ಕಡೆ ಸೆಳೆಯಲು ಈ ಕೊರೋನಾದ ಸಂಕಷ್ಟದ ಕಾಲದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹೊಸಬರ ವಿಚಾರ ಮುಖ್ಯಮಂತ್ರಿಗಳ ವಿವೇಚನೆ

ಹೊಸಬರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ವಿಚಾರ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ. ಈ ನಿಟ್ಟಿನಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಬಿಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: