ಮೈಸೂರು

ಶಾಮರಾಯರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡದ ಪ್ರಕಾರವೇ ಇಲ್ಲ :ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಬಣ್ಣನೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ಕನ್ನಡ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕಾಲೇಜಿನ ಜಯಲಕ್ಷ್ಮಣ್ಣಿ ಸಭಾಂಗಣದಲ್ಲಿ ‘ತ.ಸು.ಶಾಮರಾಯರ ಬದುಕು-ಬರಹ’ ಕುರಿತಾದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತ.ಸು.ಶಾಮರಾಯರು ಮತ್ತು ಅವರ ಶಿಷ್ಯರ ನಡುವೆ ಭಾವನಾತ್ಮಕ  ಸಂಬಂಧವಿತ್ತು.  ಪ್ರಭುಶಂಕರ, ಜಿ.ಎಸ್.ಶಿವರುದ್ರಪ್ಪ, ಎನ್.ಸುಬ್ರಹ್ಮಣ್ಯ, ತಿಪ್ಪೇಸ್ವಾಮಿ, ಹಾ.ಮಾ.ನಾಯಕ, ಲಕ್ಷ್ಮೀನಾರಾಯಣ ಭಟ್, ಬಂಗಾರಪ್ಪ ಸೇರಿದಂತೆ ನಾನೂ ಕೂಡ ಅವರ ಶಿಷ್ಯ ಬಳಗದಲ್ಲಿ ಸೇರಿದ್ದೆ. ಶಾಮರಾಯರಿಗೆ ಅವರ ಅಣ್ಣ ತಳುಕಿನ ವೆಂಕಣ್ಣಯ್ಯ  ಮಾದರಿಯಾಗಿದ್ದರು. ತಾತ್ವಿಕ ಸುಮಧುರ ದೈವೀ ಗುಣ, ಸಾಹಿತ್ಯಾಭಿಮಾನ, ಔದಾರ್ಯ ಅವರಿಗೆ ಮನೆತನದಿಂದಲೇ ವಂಶಪಾರಂಪರ್ಯವಾಗಿ ಬಂದಿತ್ತು ಎಂದರು.

ಟಿ.ಎಸ್.ವೆಂಕಣ್ಣಯ್ಯ ಅವರ ನೆಚ್ಚಿನ ಶಿಷ್ಯರಾಗಿದ್ದ ಇವರು, ತಮ್ಮ ವೃತ್ತಿ ಜೀವನದಲ್ಲಿ ಎಂದಿಗೂ ಅವರು ಹಣಕ್ಕಾಗಿ ಆಸೆ ಪಟ್ಟವರಲ್ಲ. ಭೋಗ-ಭಾಗ್ಯ, ಬಡ್ತಿ, ಸಂಬಳ, ಸಾರಿಗೆಗಳು ಅವರಿಗೆ ಸಿಕ್ಕಿರಲಿಲ್ಲ. ಬದಲಾಗಿ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸದಿಂದಲೇ ಅವರು ಶ್ರೀಮಂತರಾಗಿದ್ದರು. ಯಾವೊಬ್ಬ ವಿದ್ಯಾರ್ಥಿಯನ್ನು ಬಹುವಚನದಲ್ಲಿ ಮಾತನಾಡಿಸದೇ, ಬಹಳ ಆತ್ಮೀಯತೆಯಿಂದ ಕಾಣುತ್ತಿದ್ದರು. ಬರವಣಿಗೆಯಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಜಿ.ಎಸ್.ಶಿವರುದ್ರಪ್ಪ ಅವರು  ಬರೆದಿರುವ ಎದೆ ತುಂಬಿ ಹಾಡಿದೆನು ಎಂಬ ಅವರ ಚೊಚ್ಚಲ ಬರವಣಿಗೆಗೆ ನೀರೆರೆದು ಪ್ರೋತ್ಸಾಹಿಸಿದ್ದು ಶಾಮರಾಯರೇ ಎಂದು ತಿಳಿಸಿದರು.

ಶಾಮರಾಯರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡದ ಪ್ರಕಾರವೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಅವಿರತವಾಗಿ ದುಡಿದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಸಾಹಿತ್ಯ ಪ್ರೇಮಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅವರ ಕೃತಿಗಳು ಹೆಚ್ಚಾಗಿ ಸಿಗಬೇಕು ಎಂಬುದು ನನ್ನ ಅಭಿಲಾಷೆ ಎಂದು ಹೇಳಿದರು.

ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಪ್ರಕಾಶಕ ಹಾಗೂ ತ.ಶು.ಶಾಮರಾಯರ ಕಿರಿಯ ಮಗ ಟಿ.ಎಸ್.ಛಾಯಾಪತಿ ಮಾತನಾಡಿ, ಶಾಮರಾಯರ ವ್ಯಕ್ತಿತ್ವ ಸಮುದ್ರದಂತೆ ಹೇಳಲು ಅಸಾಧ್ಯ. ಅವರ ಜೀವನದ ಪ್ರಮುಖ ಘಟ್ಟ ಶಿಕ್ಷಕ ವೃತ್ತಿ. ಜನಪ್ರಿಯ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಮನಸ್ಸು ಗೆದ್ದಿದ್ದರು. ಅವರು ಸಮಾಜದಲ್ಲಿರುವ ಜಾತೀಯತೆ ಎಂಬ ವಿಷಬೀಜವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಿ ಮಹಾನ್ ಅನ್ನ ದಾಸೋಹಿ ಎನಿಸಿದ್ದರು.

ಕಬ್ಬಿಣದ ಕಡಲೆಯಂತಿದ್ದ ಹಳೆಗನ್ನಡ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ  ಅರ್ಥವಾಗುವಂತೆ ಸರಳೀಕರಿಸಿದರು. ಸುಮಾರು 69 ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್ ಕಾರ್ಯಕ್ರಮದ ಅಧ‍್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ವಸಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: