ಪ್ರಮುಖ ಸುದ್ದಿ

ಹಾಲು ಒಕ್ಕೂಟಗಳ ಪ್ರೋತ್ಸಾಹಧನ ಶೀಘ್ರ ಕೊಡಿಸಲು ಪ್ರಯತ್ನ; ಸಚಿವ ಎಸ್ ಟಿ ಸೋಮಶೇಖರ್

ರಾಜ್ಯ(ತುಮಕೂರು)ಜು.15:- ಹಾಲು ಒಕ್ಕೂಟಗಳಿಗೆ ಸರ್ಕಾರದ ಕಡೆಯಿಂದ ಬರಬೇಕಾದ ಪ್ರೋತ್ಸಾಹಧನವನ್ನು ಆದಷ್ಟು ಶೀಘ್ರವಾಗಿ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ತುಮಕೂರು ಸಹಕಾರಿ ಹಾಲು ಒಕ್ಕೂಟಕ್ಕೆ ಭೇಟಿ ನೀಡಿದ ಸಚಿವರು, ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಇಲ್ಲಿನ ಹಾಲು ಒಕ್ಕೂಟ ಸೇರಿದಂತೆ ಹಲವು ಡೈರಿಗಳ ಸಮಸ್ಯೆಗಳು ಗಮನಕ್ಕೆ ಬಂದಿದೆ.  ಕೋವಿಡ್ ಸಮಸ್ಯೆ ಬಗೆಹರಿಯಲಿ, ಬಳಿಕ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತೇನೆ ಎಂದು ಸಚಿವರು ತಿಳಿಸಿದರು. ಸಂಸದರಾದ ಜಿ.ಎಸ್.ಬಸವರಾಜು ಇದ್ದರು.

ತುಮಕೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಸಿ.ವಿ. ಮಹಾಲಿಂಗಯ್ಯ ಮಾತನಾಡಿ, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆ ಹೆಚ್ಚುವರಿ ಹಾಲನ್ನು ಮಾರಾಟ ಮಾಡುತ್ತಿದ್ದೆವು. ಆದರೆ, ಈಗ ಹಾಲು ಶೇಖರಣೆಯಾಗುತ್ತಿದ್ದು, ಹಾಲಿನ ಪುಡಿ ಉತ್ಪಾದನೆಯೂ ಹೆಚ್ಚುತ್ತಿದೆ. ಇದರ ಉತ್ಪಾದನೆ ಖರ್ಚು ಹೆಚ್ಚಿದ್ದು, ಟೆಡರ್ ಕರೆದರೆ ಅರ್ಧ ದರಕ್ಕೆ ಬಿಡ್ ಮಾಡಲಾಗಿದೆ. ಇನ್ನೂ ಹಲವು ಉತ್ಪನ್ನಗಳಿಗೂ ಇದೇ ರೀತಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರ್ಕಾರವೇ ಮಧ್ಯಪ್ರವೇಶ ಮಾಡಿ ನಷ್ಟ ಸರಿದೂಗಿಸಬೇಕು ಎಂದು ಕೋರಿದರು.

ಹಾಲು ಉತ್ಪನ್ನಗಳ ಘಟಕಕ್ಕೆ ಭೇಟಿ

ಇದೇ ವೇಳೆ ಹಾಲು ಉತ್ಪನ್ನಗಳ ಘಟಕಕ್ಕೆ ಭೇಟಿ ನೀಡಿದ ಸಚಿವ ಸೋಮಶೇಖರ್ ಅವರು, ಉತ್ಪಾದನಾ ಪ್ರಕ್ರಿಯೆಗಳು ಹಾಗೂ ಉತ್ಪಾದನಾ ವಿಧಾನಗಳ ಬಗ್ಗೆ ಅಧಿಕಾರಿಗಳಿಂದ ಖುದ್ದು ಮಾಹಿತಿ ಪಡೆದುಕೊಂಡರು.

ಶುಚಿತ್ವ ಹಾಗೂ ಗುಣಮಟ್ಟವನ್ನು ಪರಿಶೀಲನೆ ನಡೆಸಿ ಮೆಚ್ಚುಗೆ ಸೂಚಿಸಿದ ಸಚಿವರು, ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿ ಎಂದು ಸೂಚಿಸಿದರು. ಡಬಲ್ ಟೋನ್ಡ್ ಹಾಲು, ಯು ಎಚ್ ಟಿ ಹಾಲು, ಗುಡ್ ಲೈಫ್, ಬಿಸ್ಕೆಟ್, ಮೈಸೂರು ಪಾಕ್ ಸೇರಿದಂತೆ ಸಿಹಿ ಉತ್ಪನ್ನಗಳ ತಯಾರಿ ಹಾಗೂ ಪ್ಯಾಕೆಟಿಂಗ್ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: