ಪ್ರಮುಖ ಸುದ್ದಿಮೈಸೂರು

ಕೋವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು, ಹೊದಿಕೆ ಖರೀದಿಸುವ ವಿಚಾರದಲ್ಲಿ ಭಾರೀ ಅವ್ಯವಹಾರ ; ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಭಾಗಿ : ಎಂ. ಲಕ್ಷ್ಮಣ್ ಆರೋಪ

ಮೈಸೂರು,ಜು.16:-  ಕೋವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು, ಹೊದಿಕೆಗಳನ್ನು ಖರೀದಿಸುವ ವಿಚಾರದಲ್ಲಿ ನಡೆದಿರುವ ಭಾರೀ ಅವ್ಯವಹಾರದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ಎಸ್. ಆರ್. ವಿಶ್ವನಾಥ್ ಭಾಗಿಯಾಗಿದ್ದಾರೆಂದು ಕೆಪಿಸಿಸಿ ವಕ್ತಾರ ಎಂ.‌ ಲಕ್ಷ್ಮಣ್ ಆರೋಪಿಸಿದರು.

ಮೈಸೂರು ಕಾಂಗ್ರೆಸ್ ಕಛೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್ ಸಂಬಂಧದ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಸಂಬಂಧಿ ಡಾ. ಮಂಜುನಾಥ್ ಕೈವಾಡವಿದೆ. ಕೋವಿಡ್ ನಿಯಂತ್ರಣ ಸಂಬಂಧ ವೈದ್ಯಕೀಯ ಉಪಕರಣಗಳನ್ನು ಖರೀದಿಸಿರುವ ವಿಚಾರದಲ್ಲಿ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಮಂಜುನಾಥ್ ಭಾಗಿಯಾಗಿದ್ದಾರೆ. ಡಾ. ಮಂಜುನಾಥ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಸಂಬಂಧಿಕರಾಗಿದ್ದಾರೆ. ಕೋವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು, ಹೊದಿಕೆಗಳನ್ನು100 ದಿನಗಳಿಗೆ ಬಾಡಿಗೆ ಪಡೆಯುವುದರ ಮೂಲಕ 240 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಾರೆ ನಾಲ್ಕು ಜನ ಗುತ್ತಿಗೆದಾರರಿಗೆ ನೀಡಲಾಗಿದ್ದು,  ಬೆಂಗಳೂರಿನ ಮಂತ್ರಿಗಳ ಸಂಬಂಧಿಕರಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕೋವಿಡ್ ಹೆಸರನ್ನು ಹೇಳಿಕೊಂಡು ಬಿಜೆಪಿ ಮುಖಂಡರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಿದ್ದರೂ ಬಿಜೆಪಿ ಯಿಂದ ಹಣದ ಲೂಟಿ ನಿಂತಿಲ್ಲ. ಕೋವಿಡ್ ನಿಯಂತ್ರಣ ವಿಚಾರದಲ್ಲಿ ವಿವಿಧ ಇಲಾಖೆಗಳ ಮಂತ್ರಿಗಳ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ. ಕೊರೋನಾ ಸೋಂಕಿತರನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಬಿಜೆಪಿ ಮುಖಂಡರು ಕೇವಲ ಹೇಳಿಕೆಗೆ ಮತ್ತು ಪ್ರಚಾರಕ್ಕೆ ಸೀಮಿತರಾಗಿದ್ದಾರೆ ಎಂದು ಆರೋಪಿಸಿದರು.

ಕೊರೋನಾ ಚೈನಾ ದೇಶದಿಂದ ನಮಗೆ ಬಂತು,ಆದರೆ ನಮ್ಮ ದೇಶದಲ್ಲಿ ಮೊವೀಡ್ 20 ಆಗಿ ಉದ್ಭವ ಆಗಿದೆ. ಇದು ಮೋದಿ ವೈರಸ್. ಸರ್ಕಾರ ಸೋಂಕಿತರನ್ನು ಓಡಾಡೋಕ್ಕೆ ಬಿಟ್ಟು ಸ್ವತಃ ಗ್ರಾಮೀಣ ಭಾಗದಲ್ಲಿ ಸೋಂಕು ಹರಡಿಸುತ್ತಿದೆ. ತಜ್ಞರ ಅಭಿಪ್ರಾಯ ಪಡೆಯುವ ಸೌಜನ್ಯ,ವಿರೋಧ ಪಕ್ಷದ ಅಭಿಪ್ರಾಯ ಕೇಳೊ ಸೌಜನ್ಯ ರಾಜ್ಯ ಸರ್ಕಾರಕ್ಕೆ ಇಲ್ಲ. ಸರ್ಕಾರ ನಡೆಸುವವರಿಗೆ ಸಾಮಾನ್ಯ ಜ್ಞಾನ ಇಲ್ಲ. ಕಂದಾಯ ಸಚಿವ ಅಶೋಕ ಕೇವಲ 550 ಕೋಟಿ ಮಾತ್ರ ಖರ್ಚಾಗಿದೆ ಅಂತ ಹೇಳ್ತಾರೆ. ಅಶೋಕ ಅವರೆ ನಾವು ಕೇಳ್ತಾ ಇರೋದು 5,6  ಡಿಪಾರ್ಟ್ ಟ್ಮೆಂಟ್ ನದ್ದು.ಕೇವಲ ಒಂದು ಡಿಪಾರ್ಟ್ ಮೆಂಟ್ ನದ್ದಲ್ಲ. ಅಶೋಕರವರೇ ನಿಮಗೆ ಸುಳ್ಳ ಹೇಳಲು ಚೆನ್ನಾಗಿ ಗೊತ್ತು. ಸಿದ್ದರಾಮಯ್ಯನವರ ಲೆಕ್ಕ ಕೊಡಿ ಚಳುವಳಿಗೆ ಪತ್ರದ ಮೂಲಕ ಉತ್ತಕ ಕೊಡುವುದಾಗಿ ನಮ್ಮ ಉಸ್ತುವಾರಿ ಸಚಿವರು ಹೇಳ್ತಾರೆ. ಆದ್ರೆ ಅವರ ಮನೆಗೆ ತಲುಪಿಸೋ ಲೆಕ್ಕದ ಪತ್ರದಲ್ಲಿ ಅಪೂರ್ಣ ಮಾಹಿತಿ ನೀಡಿದ್ದಾರೆ. ಇದು ಬಿಜೆಪಿಯವರ ಕೆಲಸ ಎಂದು ವಾಗ್ದಾಳಿ ನಡೆಸಿದರು.

ಭೂ ಸುದಾರಣೆ ಕಾಯ್ದೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈಗಾಗಲೇ ಸರ್ಕಾರ ಕಾಯ್ದೆ ರದ್ದು ಮಾಡಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಸರ್ಕಾರ ನಮ್ಮ ರೈತರಿಗೆ ಮರಣ ಶಾಸನ ಬರೆದಾಗಿದೆ. ರೈತರ ಹೆಸರಲ್ಲಿ ಹಸಿರು ಟವಲ್ ಹಾಕಿ ಪ್ರಮಾಣ ವಚನ ಸ್ವೀಕಾರ ಮಾಡಿ ಯಡಿಯೂರಪ್ಪ ರೈತರ ಕುತ್ತಿಗೆ ಮೇಲೆ ಕಾಲಿಡುವ ಕೆಲಸ ಮಾಡಿದ್ದಾರೆ. ಬಿಜೆಪಿ ಅಂದರೆ ಭೂಗಳ್ಳರ ಜನತಾ ಪಾರ್ಟಿ ಅಂತ ಹೊಸ ನಾಮಕರಣ ಮಾಡುತ್ತಿದ್ದೇವೆ. ಜಮೀನುದಾರರು ಪದ್ಧತಿ ವಾಪಸ್ಸು ತರುವ ಕಾಯ್ದೆ ಇದು. 216 ಎಕೆರೆ ತನಕ ಈ ಕಾಯ್ದೆ ಮೂಲಕ ಒಂದು ಕುಟುಂಬ ತೆಗೆದುಕೊಳ್ಳಬಹುದು. ಕೈಗಾರಿಕೆಯವರಿಗೆ ಇದು ಅನ್ ಲಿಮಿಟೆಡ್. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿದ್ರೆ ರಾಜ್ಯದಲ್ಲಿ 5ಲಕ್ಷ  ಪದವೀಧರು ವರ್ಷಕ್ಕೆ ಹೊರ ಬರ್ತಿದ್ದಾರೆ, ಅವರೆಲ್ಲರಿಗೂ ಒಳ್ಳೆಯದಾಗಲಿ ಅಂತ ಕಾಯ್ದೆ ತಂದಿದ್ದೇವೆ ಅಂತಾರೆ. ದೊಡ್ಡವರು ಪದವೀಧರರಿಗೆ ಪಕೋಡ ಮಾಡಲು ಹೇಳ್ತಾರೆ,ಇವರು ಹೊಲ ಊಳಲು ಹೇಳ್ತಾರೆ. ಏನಾಯ್ತು ನಿಮ್ಮ ವರ್ಷಕ್ಕೆ 2 ಕೋಟಿ ಉದ್ಯೋಗ ವಿಚಾರ. ಮುಂದಿನ ದಿನಗಳಲ್ಲಿ ದೇಶವನ್ನ ಭಿಕ್ಷುಕರಾಗಿ ಮಾಡೋ ಆಸೆ ಬಿಜೆಪಿಯವರದ್ದು. ಸೌಜನ್ಯಕ್ಕಾದ್ರೂ ರೈತ ಮುಖಂಡರನ್ನು ಈ ವಿಚಾರವಾಗಿ ಮಾತನಾಡೋ ಸೌಜನ್ಯನು ಸರ್ಕಾರ ತೋರಲಿಲ್ಲ. ಲಾಕ್ ಡೌನ್ ನ್ನು ಲಾಭವಾಗಿಸಿಕೊಂಡು ಕಾಯ್ದೆ ಜಾರಿ ತಂದಿದ್ದೀರಿ. ಸುಳ್ಳು ಹೇಳೋದು ಬಿಟ್ಟರೆ ಬಿಜೆಪಿಯವರಿಗೆ ಏನೂ ಇಲ್ಲ ಎಂದು ಕಿಡಿಕಾರಿದರು.

ತಿರುವನಂತಪುರಂನ ಕಂಪನಿಯಿಂದ 630 ವೆಂಟಿಲೇಟರ್ ಗಳನ್ನು ಖರೀದಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯ ಸರ್ಕಾರ ಕೊಟ್ಟಿರುವ ಲೆಕ್ಕದಲ್ಲೂ ಇದು ನಮೂದಾಗಿದೆ.  ಈಗ ಎರಡು ವರ್ಷದಿಂದ ವೆಂಟಿಲೇಟರ್ ಗಳನ್ನು ತಯಾರಿಸುತ್ತಿದೆ. ಇಂತಹ ಕಂಪನಿಯಿಂದ ವ್ಹೆಂಟಿಲೇಟರ್ ಖರೀದಿ ಮಾಡಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರೆ ಮಂಜುಳ ಮಾನಸ, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: