ದೇಶಪ್ರಮುಖ ಸುದ್ದಿ

ಲಡಾಖ್ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ: ಸಚಿವರ ಸಮ್ಮುಖದಲ್ಲಿ ಪ್ಯಾರಾ ಗ್ಲೈಡರ್‌ಗಳ ಸಾಹಸ

ಲೇಹ್(ಲಡಾಖ್),ಜು.17-ಭಾರತ-ಚೀನಾ ಗಡಿ ಘರ್ಷಣೆ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್ ಭೇಟಿಗೆ ನೀಡಿದ್ದಾರೆ. ಗಡಿಗೆ ಭೇಟಿ ನೀಡಿ ಮುಂಚೂಣಿ ಸೇನಾ ನೆಲೆಗಳ ಸಿದ್ಧತೆ ಕುರಿತು ಹಿರಿಯ ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ರಕ್ಷಣಾ ಸಚಿವರ ಸಮ್ಮುಖದಲ್ಲಿ ಭಾರತೀಯ ಸೇನೆ ಪ್ಯಾರಾಚೂಟ್ ರೆಜಿಮೆಂಟ್,‌ ವಿಮಾನಗಳ ಮೂಲಕ ಗಡಿಗೆ ಯೋಧರನ್ನು ಹಾಗೂ ರಕ್ಷಣಾ ಉಪಕರಣಗಳನ್ನು ಇಳಿಸುವ ಸಮರಾಭ್ಯಾಸವನ್ನು ಪ್ರದರ್ಶಿಸಿತು. ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾಣೆ ಸಾಥ್ ನೀಡಿದರು.

ಪ್ಯಾರಾ ಡ್ರಾಪಿಂಗ್ ಎಕ್ಸೈಸ್ ಎಂದು ಕರೆಯಲ್ಪಡುವ ಈ ಸಮರಾಭ್ಯಾಸವನ್ನು ರಕ್ಷಣಾ ಸಚಿವರ ಸಮ್ಮುಖದಲ್ಲಿ ನಡೆಸುವ ಮೂಲಕ ಗಡಿ ಸಿದ್ಧತೆಗಳ ಕುರಿತು ಪರೋಕ್ಷವಾಗಿ ಚೀನಾಗೆ ಸಂದೇಶ ರವಾನಿಸಲಾಯಿತು.

ಸ್ಟಕ್ನಾ ಮತ್ತು ಲೇಹ್ ಮುಂಚೂಣಿ ಸೇನಾ ನೆಲಗಳಲ್ಲಿ ರಕ್ಷಣಾ ಸಚಿವರ ಮುಂದೆ ಸಮರಾಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ.

ಗಡಿ ಸುರಕ್ಷತೆಗಾಗಿ ಸೈನಿಕರು ಬಳಸುವ ಅತ್ಯಾಧುನಿಕ ಪಿಕಾ ಮಷಿನ್ ಗನ್‌ ಬಳಕೆಯ ಕುರಿತು ಹಿರಿಯ ಸೇನಾಧಿಕಾರಿಗಳಿಂದ ಮಾಹಿತಿ ಪಡೆದ ರಾಜನಾಥ್ ಸಿಂಗ್, ಬಳಿಕ ಬಂದೂಕನ್ನು ಮೇಲೆತ್ತಿ ಗುರಿಯಿಟ್ಟಿದ್ದು ಎಲ್ಲರ ಗಮನ ಸೆಳೆಯಿತು.

ರಾಜನಾಥ್ ಸಿಂಗ್ ಅವರು ಗಡಿಗೆ ಭೇಟಿ ನೀಡಿದರಿಂದ ಸೈನಿಕರ ಹುಮ್ಮಸ್ಸು ದ್ವಿಗುಣಗೊಂಡಿದ್ದು, ಸಮರಾಭ್ಯಾಸದ ಮೂಲಕ ಚೀನಾಗೆ ಪರೋಕ್ಷ ಸಂದೇಶ ರವಾನೆ ಮಾಡಲಾಗಿದೆ.

ಜುಲೈ ಆರಂಭದಲ್ಲಿಯೇ ರಾಜನಾಥ್ ಸಿಂಗ್ ಲಡಾಕ್ ಗೆ ಭೇಟಿ ನೀಡುವವರಿದ್ದರು. ಆದರೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಕಳೆದ ಜುಲೈ 3ರಂದು ಪ್ರಧಾನಿ ಮೋದಿ ಇಲ್ಲಿಗೆ ಆಗಮಿಸಿ ಭದ್ರತೆ, ಸುರಕ್ಷತೆ ಬಗ್ಗೆ ಪರಾಮರ್ಶೆ ನಡೆಸಿ ಯೋಧರನ್ನು ಮಾತನಾಡಿಸಿ ಅವರಲ್ಲಿ ಧೈರ್ಯ ತುಂಬಿಸಿದ್ದರು. ಅಲ್ಲದೆ ಗಡಿ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧರ ಆರೋಗ್ಯ, ಯೋಗಕ್ಷೇಮ ವಿಚಾರಿಸಿದ್ದರು.

ಇಂದು ಲೇಹ್, ಲಡಾಕ್ ಗೆ ಭೇಟಿ ಕೊಟ್ಟ ನಂತರ ಸಚಿವ ರಾಜನಾಥ್ ಸಿಂಗ್ ನಾಳೆ ಜಮ್ಮು-ಕಾಶ್ಮೀರಕ್ಕೆ ತೆರಳಲಿದ್ದಾರೆ. (ಎಂ.ಎನ್)

Leave a Reply

comments

Related Articles

error: