
ದೇಶಪ್ರಮುಖ ಸುದ್ದಿ
ಜಗತ್ತಿನ ಯಾವುದೇ ಶಕ್ತಿ ಭಾರತದ ಒಂದಿಂಚು ಭೂಮಿಯನ್ನು ಮುಟ್ಟಲು ಸಾಧ್ಯವಿಲ್ಲ: ಸಚಿವ ರಾಜನಾಥ್ ಸಿಂಗ್
ಲಡಾಖ್,ಜು.17-ಭಾರತ ದುರ್ಬಲ ರಾಷ್ಟ್ರವಲ್ಲ. ಜಗತ್ತಿನ ಯಾವುದೇ ಶಕ್ತಿಯೂ ಭಾರತದ ಒಂದಿಂಚು ಭೂಮಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲಡಾಖ್ ಗೆ ಭೇಟಿ ನೀಡಿ ಭಾರತೀಯ ಸೇನೆ ಮತ್ತು ಇಂಡೊ-ಟಿಬೆಟನ್ ಗಡಿ ಪೊಲೀಸ್ ಪಡೆ (ಐಟಿಬಿಪಿ) ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಗಡಿ ವಿವಾದ ಬಗೆಹರಿಸಿಕೊಳ್ಳಲು ಪರಸ್ಪರ ಮಾತುಕತೆ ನಡೆಯುತ್ತಿದೆ. ಆದರೆ, ಎಷ್ಟರ ಮಟ್ಟಿಗೆ ಅದು ಪರಿಹಾರವಾಗಲಿದೆ ಎಂಬುದನ್ನು ಖಚಿತಪಡಿಸಲಾರೆ. ‘ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಂಡರೆ, ಅದಕ್ಕಿಂತಲೂ ಉತ್ತಮ ಮತ್ತೊಂದಿಲ್ಲ’ ಎಂದರು.
ನಿಮ್ಮೆಲ್ಲರನ್ನೂ ಭೇಟಿ ಮಾಡಿರುವುದು ನನಗೆ ಸಂತಸ ತಂದಿದೆ. ಸಂಘರ್ಷದಲ್ಲಿ ಕಳೆದುಕೊಂಡ ಸೈನಿಕರ ಬಗ್ಗೆ ದುಃಖಿತನಾಗಿರುವೆ. ಅವರಿಗೆ ನನ್ನ ಗೌರವಗಳನ್ನು ಸಮರ್ಪಿಸುತ್ತೇನೆ. ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲು ಭಾರತ ಬಿಡುವುದಿಲ್ಲ ಎಂದಿದ್ದಾರೆ.
ಲಡಾಖ್ ಗೆ ಭೇಟಿ ನೀಡಿರುವ ರಾಜನಾಥ್ ಸಿಂಗ್ ಸಮಗ್ರವಾಗಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಆರ್ಮಿ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಉಪಸ್ಥಿತರಿದ್ದರು. (ಎಂ.ಎನ್)