ಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್ ನವರು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ : ಶ್ರೀರಾಮುಲು

ಬಿಜೆಪಿ ಮತ್ತು ಯಡಿಯೂರಪ್ಪ ಅವರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವ ಮೂಲಕ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್ ಮುಖಂಡರು ಮೊದಲಿಗೆ ತಮ್ಮ ಸರ್ಕಾರ ಜನರಿಗೆ ಏನು ಮಾಡಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಂಸತ್ ಸದಸ್ಯರಾದ ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಶ್ರೀನಿವಾಸ ಪ್ರಸಾದ್ ಅವರ ಪರ ನೇರಳೆ, ಹಳೇಪುರ ಮತ್ತಿತರ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಅವರು ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಚಿವ ದಿನೇಶ್ ಗುಂಡೂರಾವ್ ಮತ್ತಿತರ ಕಾಂಗ್ರೆಸ್ ನಾಯಕರು ಬಿ.ಎಸ್.ಯಡಿಯೂರಪ್ಪ ಅವರು ದತ್ತು ತೆಗೆದುಕೊಂಡಿದ್ದ ಗ್ರಾಮಗಳು ಅಭಿವೃದ್ಧಿ ಹೊಂದಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ, ಯಡಿಯೂರಪ್ಪ ಅವರು ತಮ್ಮ ನೇತೃತ್ವದ ಸರ್ಕಾರವಿದ್ದಾಗ ನುಡಿದಂತೆ ನಡೆದುಕೊಂಡಿದ್ದಾರೆ. ಆದರೆ ಕಳೆದ ಎರಡು ವರ್ಷಗಳ ಹಿಂದೆ ಬಳ್ಳಾರಿ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‍ನವರು 3 ಸಾವಿರ ಕೋಟಿ ರೂ.ಗಳ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆ ಭರವಸೆ ಇಂದಿಗೂ ಈಡೇರಿಲ್ಲ. ಇಂಥ ಹಲವು ಉದಾಹರಣೆಗಳಿದ್ದು ಅದನ್ನು ಕಾಂಗ್ರೆಸ್ ಮುಖಂಡರು ಅರಿತುಕೊಳ್ಳಬೇಕು ಎಂದರು.
ಕಾಂಗ್ರೆಸ್‍ನವರು ಮತದಾರರ ಕಣ್ಣಿಗೆ ಮಣ್ಣೆರಚಲು ಹಲವಾರು ಪೊಳ್ಳು ಭರವಸೆಗಳನ್ನು ನೀಡುತ್ತಾ ಗಿಮಿಕ್ ಮಾಡುತ್ತಿರುತ್ತಾರೆ. ಆದರೆ ಅಂಥದ್ದೇ ಗಿಮಿಕ್‍ಗಳನ್ನು ನಾವೂ ಮಾಡುತ್ತಿದ್ದೇವೆ ಎಂದು ಅವರು ಭಾವಿಸಿಕೊಳ್ಳುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದರು.
ಪ್ರಚಾರದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಚಿಕ್ಕರಂಗನಾಯಕ, ಸತೀಶ್, ಅನಿಲ್ ಕುಂಬ್ರಳ್ಳಿ, ಶಿವಣ್ಣ, ಗಿರೀಶ್ ಮತ್ತಿತರರು ಪಾಲ್ಗೊಂಡಿದ್ದರು.

ರೋಡ್ ಶೋ

ಬಿ.ಶ್ರೀರಾಮುಲು ಅವರು ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರೊಡನೆ ಹೆಡತಲೆ ಗ್ರಾಮದಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಅವರ ಪರ ಮತ ಯಾಚಿಸಿದರು.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: