ಮೈಸೂರು

ಯುಗಾದಿ ಹಬ್ಬಕ್ಕೆ ಭರ್ಜರಿ ಸಿದ್ಧತೆ : ಗ್ರಾಹಕರಿಗೆ ಬೆಲೆಯೇರಿಕೆಯ ಬಿಸಿ

ಮುಂಬರುವ ಎಲ್ಲ ಹಬ್ಬಗಳಿಗೂ ಮುನ್ನುಡಿ ಬರೆಯುವ, ಕಷ್ಟ-ಸುಖಗಳೆರಡನ್ನೂ ಸಮನಾಗಿ ಸ್ವೀಕರಿಸುವುದರ ಸಂಕೇತವಾಗಿ ಬೇವು-ಬೆಲ್ಲವನ್ನು ಮೆಲ್ಲುವ, ವರುಷಕ್ಕೊಂದು ಹೊಸ ಜನ್ಮ ಪಡೆವ ಪ್ರಕೃತಿ ದೇವಿಗೆ ನಮಿಸುವ,  ಯುಗಾದಿ ಹಬ್ಬದ ಸಿದ್ಧತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೋರಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾರ್ವಜನಿಕರಿಗೆ ಸಿಹಿಗಿಂತ ಕಹಿ ಎನಿಸಿದರೂ ಅಗತ್ಯ ವಸ್ತುಗಳ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ.
ಹೊಸವರ್ಷವನ್ನು ವರ್ಷದ ಮೊದಲ ದಿನವನ್ನಾಗಿ ಆಚರಿಸುವ ಸಂಪ್ರದಾಯ ಜಗತ್ತಿನಾದ್ಯಂತ ರೂಢಿಯಲ್ಲಿದೆ. ಜನವರಿ ತಿಂಗಳ ಮೊದಲ ದಿನವನ್ನು ವರ್ಷಾರಂಭವೆಂದು ರೋಮನ್ನರು, ಆಂಗ್ಲರು ಸೇರಿದಂತೆ ಪಾಶ್ಚಿಮಾತ್ಯರೆಲ್ಲರೂ ಆಚರಿಸುತ್ತಾರೆ. ಯುಗಾದಿ ಎನ್ನುವುದು ಯುಗದ ಆದಿ. ಯುಗವೆಂದರೆ ಸೃಷ್ಟಿಯ ಕಾಲಮಾನ ಅರ್ಥಾತ್ ಹೊಸ ವರ್ಷ. ಆದಿ ಎಂದರೆ ಆರಂಭ ಅಥವಾ ವರ್ಷದ ಪ್ರಾರಂಭದ ದಿನ. ಅಂದರೆ ಹೊಸ ವರ್ಷದ ಪ್ರಾರಂಭದ ದಿನವೇ ಯುಗಾದಿ. ಹಲವು ಪರಂಪರೆಗಳ ಆಗಮನದ ಕಾಲವಾಗಿ ಯುಗಾದಿ ಭಾರತೀಯರಲ್ಲಿ ರೂಢಿಗೆ ಬಂದಿದೆ. ವರ್ಷದ ಮೊದಲ ದಿನವನ್ನು ಅದ್ಧೂರಿಯಾಗಿ ಸ್ವಾಗತಿಸುವ ಖುಷಿಯಲ್ಲಿರುವ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಡೆಯನ್ನುಂಟುಮಾಡಿದೆ.
ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಮಂಗಳವಾರ  ದೇವರಾಜ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಹಬ್ಬಕ್ಕೆ ಬೇಕಾದ ಬೇವು, ಬೆಲ್ಲ, ಹೂ, ಹಣ್ಣು, ತರಕಾರಿ, ದಿನಸಿ ಸೇರಿದಂತೆ ಅಗತ್ಯವಸ್ತುಗಳ ಖರೀದಿ ಜೋರಾಗಿತ್ತು. ಸೇವಂತಿಗೆ ಹೂ ಮಾರಿಗೆ 70ರಿಂದ 100 ರೂ, ಮಲ್ಲಿಗೆ 70, ಏಲಕ್ಕಿ ಬಾಳೆಹಣ್ಣು ಕೆಜಿಗೆ 70 ರೂ ಆದರೆ ಕ್ಯಾರೇಟ್ 40, ಬೀನ್ಸ್ 80, ಟೊಮೋಟೊ 20 ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಹಣ್ಣು, ಹೂವಿನ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಬಿಸಿ ಮುಟ್ಟಿಸಿತು. (ಬಿ.ಎಂ-ಎಸ್.ಎಚ್)

 

Leave a Reply

comments

Related Articles

error: