ಮೈಸೂರು

ದುರ್ಮುಖಿಗೆ ವಿದಾಯ ಹೇವಿಳಂಬಿಗೆ ಸ್ವಾಗತ

ಬುಧವಾರ ಭುವಿಗೆ ಕಿರಣಗಳ ಸ್ಪರ್ಶಿಸಿದ ಸೂರ್ಯನಲ್ಲಿ, ಅರಳಿದ ಸುಮರಾಶಿಗಳಲ್ಲಿ, ಸುಮಗಳ ಮಧುವನು ಹೀರಲು ಆಗಮಿಸಿದ ದುಂಬಿಗಳಲಿ, ಹಕ್ಕಿಗಳ ಕೂಜನಗಳಲ್ಲಿ ಎಲ್ಲದರಲ್ಲೂ ಏನೋ ಹೊಸತನವಿತ್ತು. ಅದಕ್ಕೆ ಕಾರಣವೂ ಇತ್ತು. ಸೂರ್ಯನುದಯಿಸುತ್ತಿದ್ದಂತೆ ವಸಂತನಾಗಮನವಾಗಿತ್ತು. ಅಂದರೆ ಚೈತ್ರವು ಎಲ್ಲೆಡೆ ಪಲ್ಲವಿಸಿತ್ತು. ದುರ್ಮುಖಿನಾಮ ಸಂವತ್ಸರಕ್ಕೆ ಶುಭವಿದಾಯ ಹೇಳಿ ಹೇವಿಳಂಬಿನಾಮ ಸಂವತ್ಸರವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಬೇಂದ್ರೆಯವರ ಹಾಡು ಎಷ್ಟು ಅತ್ಯದ್ಭುತ. ಪ್ರತಿವರ್ಷ ಹಾಡಿದರೂ ಮತ್ತೆ ಮತ್ತೆ ಅದನ್ನೇ ಗುನುಗುನಿಸಬೇಕು ಎನ್ನಿಸುವಂಥದ್ದು. ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’ ಹೊಂಗೆ ಹೂವ ತೊಂಗಲಲ್ಲಿ ಬೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ’ ಈ ವಸಂತನ ಆಗಮನವೇ ಹಾಗೆ. ಈ ಸಂದರ್ಭ ಭಾರತೀಯರು ಹೊಸವರ್ಷವೆಂದು ಆಚರಿಸುತ್ತಾರೆ. ಚಾಂದ್ರಮಾನ ಯುಗಾದಿ ಎಂದು ಕರೆಯಿಸಿಕೊಳ್ಳುವ ಈ ಸಮಯ ಪ್ರಕೃತಿಯಲ್ಲೆಲ್ಲ ಹೊಸತನವನ್ನು ಅಳವಡಿಸಿಕೊಂಡಿರುತ್ತದೆ.

ಗಿಡಮರಗಳು ಚಿಗುರಿ ಹಸಿರಾಗಿ ಕಂಗೊಳಿಸುತ್ತವೆ. ಮಾವಿನ ಮರಗಳಲಿ ಮಾವಿನ ಕಾಯಿಗಳು ತೂಗಾಡುತ್ತವೆ. ಕೋಗಿಲೆಗಳು ಹಾಡತೊಡಗುತ್ತದೆ. ವಸಂತ ನವರಾತ್ರಿಯ ಆರಂಭಕಾಲ. ತಾಯಿ ದುರ್ಗಾದೇವಿಯ ಆರಾಧನೆಯ ಕಾಲ. ಎಲ್ಲರೂ ಮನೆಯನ್ನು ಶುಭ್ರಗೊಳಿಸಿ, ಮನೆಯ ಮುಂದೆ ರಂಗೋಲಿಯಿಟ್ಟು, ಹೊಸ ವಸ್ತ್ರಗಳನ್ನು ಧರಸಿ, ಮನೆಯ ಬಾಗಿಲಿಗೆ ಮಾವಿನ ಬೇವಿನ ಎಲೆಗಳಿಂದ ಸಿಂಗರಿಸಿ ದೇವರ ನೈವೇದ್ಯಕ್ಕೆ ಒಬ್ಬಟ್ಟನ್ನು ತಯಾರಿಸಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಿದರು. ಅಷ್ಟೇ ಅಲ್ಲದೇ ಬೇವಿನ ಎಲೆ,ಬೆಲ್ಲವನ್ನು ಪರಸ್ಪರರಿಗೆ ಕೊಟ್ಟು ಜೀವನದಲ್ಲಿನ ಸಿಹಿಕಹಿಗಳನ್ನು ಸಮನಾಗಿ ಎದೆಗುಂದದೇ ಸ್ವೀಕರಿಸಲು ಮನೆಯಲ್ಲಿನ ಹಿರಿಯರು ಕಿರಿಯರಿಗೆ ತಿಳಿಸಿದರು.

ದೇವಾಲಯಗಳಲ್ಲಿ ಪಂಚಾಂಗ ಶ್ರವಣ ನಡೆಯಿತು. ಈ ಬಾರಿಯ ಮಳೆ ಬೆಳೆಗಳ ಕುರಿತು ತಿಳಿಸಲಾಯಿತು.  ದೇವಾಲಯಗಳಲ್ಲಿಯೂ ವಿಶೇಷಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.

ಹೇವಿಳಂಬಿ ನಾಮ ಸಂವತ್ಸರವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಈ ಸಂವತ್ಸರವು ಎಲ್ಲರಲ್ಲಿಯೂ ಹೊಸತನವನ್ನು ತುಂಬಿ, ಒಳಿತನ್ನುಂಟು ಮಾಡಲಿ.  (ಎಸ್.ಎಚ್)

Leave a Reply

comments

Related Articles

error: