
ಮೈಸೂರು
ಮೈಸೂರು ಜಿಲ್ಲಾ ಪಂಚಾಯತಿ ಸಾಮಾಜಿಕ ಸ್ಥಾಯಿ ಅಧ್ಯಕ್ಷರಾಗಿ ಬೆಟ್ಟದಪುರ ಮಂಜುನಾಥ್ ಆಯ್ಕೆ
ಮೈಸೂರು,ಜು.22:- ಮೈಸೂರು ಜಿಲ್ಲಾ ಪಂಚಾಯತಿ ಸಾಮಾಜಿಕ ಸ್ಥಾಯಿ ಅಧ್ಯಕ್ಷರಾಗಿ ಬೆಟ್ಟದಪುರ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಸಾಮಾಜಿಕ ಸ್ಥಾಯಿ ಅಧ್ಯಕ್ಷ ಸ್ಥಾನಕ್ಕೆ ಚುನವಾಣೆ ನಡೆಯಿತು. ಏಳು ಸದಸ್ಯರ ಪೈಕಿ ನಾಲ್ಕು ಮತಗಳನ್ನು ಪಡೆದು ಬೆಟ್ಟದಪುರ ಮಂಜುನಾಥ್ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಮಾಜಿ ಸಚಿವ ಜಿ.ಟಿ ದೇವೇಗೌಡರ ಆಪ್ತೆ ಚಂದ್ರಿಕಾ ಸುರೇಶ್ ಗೆ ಹೀನಾಯ ಸೋಲುಂಟಾಯಿತು. ಚಂದ್ರಿಕಾ ಸುರೇಶ್ ಮೂರು ಮತಗಳ ಪಡೆದು ಪರಾಜಿತರಾದರು.
ಸಾ.ರಾ ಮಹೇಶ್ ವಿರುದ್ಧ ಅಸಮಾಧಾನ
ಜಿಲ್ಲಾಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ಧ ಪರಾಜಿತ ಅಭ್ಯರ್ಥಿ ಚಂದ್ರಿಕಾ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಸೋಲಿಗೆ ಶಾಸಕ ಸಾರಾ ಮಹೇಶ್ರೇ ಕಾರಣ. ಜಿ.ಟಿ ದೇವೇಗೌಡ ಬೆಂಬಲಿಗರು ಅನ್ನೋ ಕಾರಣಕ್ಕೆ ನನಗೆ ಸಾರಾ ಮಹೇಶ್ ಅವರು ಅಧ್ಯಕ್ಷ ಸ್ಥಾನ ಕೈ ತಪ್ಪಿಸಿದ್ದಾರೆ. ಪ್ರಾರಂಭದಲ್ಲಿ ನನ್ನ ಹೆಸರನ್ನು ಪ್ರಸ್ತಾಪ ಮಾಡಿ ಕೊನೆ ಕ್ಷಣದಲ್ಲಿ ಕೈಬಿಟ್ಟಿದ್ದಾರೆ. ನನಗೆ ಅವಮಾನ ಮಾಡಬೇಕೆಂದು ಸಾ.ರಾ ಮಹೇಶ್ ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪಕ್ಷಕ್ಕೆ ನಾನು ಯಾವ ದ್ರೋಹನೂ ಮಾಡಿಲ್ಲ. ಸಾ.ರಾ ಮಹೇಶ್ ಸಹೋದರ ಸಾರಾ ನಂದೀಶ್ ಪಕ್ಷಕ್ಕೆ ದ್ರೋಹ ಮಾಡಿದವರು. ಇದನ್ನು ಮೊದಲು ಸಾ.ರಾ ಮಹೇಶ್ ಅರ್ಥಮಾಡಿಕೊಳ್ಳಬೇಕು ಎಂದು ಸಾ.ರಾ ಮಹೇಶ್ ವಿರುದ್ಧ ಚಂದ್ರಿಕಾ ಸುರೇಶ್ ಆಕ್ರೋಶ ಹೊರ ಹಾಕಿದರು. (ಕೆ.ಎಸ್,ಎಸ್.ಎಚ್)