ಮೈಸೂರು

ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಕದ್ದ ಕಳ್ಳರ ಬಂಧನ

ಮೈಸೂರು,ಜು.23:- ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ  ಕಳೆದ ಹದಿನೈದು ದಿನಗಳ ಹಿಂದೆ ಕಂಪ್ಯೂಟರ್ ಹಾಗೂ ಇನ್ನಿತರ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಕೃಷ್ಣರಾಜ ಪೊಲೀಸ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಶಿವಮೊಗ್ಗ ಮೂಲದ ಚಂದ್ರನಾಯಕ್ ಎಂಬವರ ಮಗ ಶಶಿಕುಮಾರ್(28) ಹಾಗೂ ತುಮಕೂರಿನ ದಿ. ನರಸಿಂಹ ಮೂರ್ತಿ ಎಂಬವರ ಮಗ ನರಸಿಂಹ(27) ಎಂದು ಗುರುತಿಸಲಾಗಿದೆ.  ಇವರು ಜು.6ರಂದು ನಗರದ ಚಾಮರಾಜ ಜೋಡಿ ರಸ್ತೆಯಲ್ಲಿದ್ದ ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜಿನ ಕೊಠಡಿಯ ಬೀಗ ಮುರಿದು ಅಲ್ಲಿದ್ದ ಕಂಪ್ಯೂಟರ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕದ್ದೊಯ್ದಿದ್ದರು. ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ರಾಮಾನುಜ ರಸ್ತೆಯಲ್ಲಿರುವ ನಾಗಲಿಂಗ ಸ್ವಾಮಿ ದೇವಾಲಯದ ಬಳಿಯ ಮಂಟಪದಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ಇಬ್ಬರು ಕಂಡು ಬಂದಿದ್ದು, ವಿಚಾರಣೆ ನಡೆಸಿದ ವೇಲೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಕಂಪ್ಯೂಟರ್ ಕದ್ದ ಕಳ್ಳರಿಗೆ ಅದನ್ನು ಮಾರಲು ಸಾಧ್ಯವಾಗಿರಲಿಲ್ಲ. ಸಿಕ್ಕಷ್ಟು ಹಣಕ್ಕೆ ಮಾರಲು ಸಿದ್ಧರಾಗಿದ್ದರಾದರೂ ಗಿರಾಕಿಗಳು ಸಿಗದೆ ಅಲೆಮಾರಿಗಳಾದ ಇವರು ಕಂಪ್ಯೂಟರ್ ಸಮೇತ ಪಾಳುಮಂಟಪದಲ್ಲಿ ವಾಸ್ತವ್ಯ ಹೂಡಿದ್ದರು.

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ಸಪೆಕ್ಟರ್ ಎಲ್.ಶ್ರೀನಿವಾಸ್, ಷರೀಫ್, ಶ್ರೀನಿವಾಸ ಪ್ರಸಾದ್, ಸತೀಶ್, ದೇವರಾಜ್, ರಾಗಿಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: