ದೇಶಪ್ರಮುಖ ಸುದ್ದಿ

ರಾಜ್ಯಪಾಲರನ್ನು ಭೇಟಿಯಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ಜೈಪುರ,ಜು.24-ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಕಲರಾಜ್ ಮಿಶ್ರಾ ಅವರನ್ನು ಭೇಟಿಯಾಗಿದ್ದಾರೆ.

ಈ ವೇಳೆ ಕಾಂಗ್ರೆಸ್ ಶಾಸಕರು, ರಾಜ್ಯಪಾಲರು ಕೂಡಲೇ ವಿಧಾನಸಭೆ ಅಧಿವೇಶನ ಕರೆಯಬೇಕೆಂದು ಘೋಷಣೆ ಕೂಗಿದರು. ಇಂದು ರಾಜಸ್ತಾನ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಕ್ರಮದ ಬಗ್ಗೆ ಹೆಜ್ಜೆಯಿಟ್ಟಿರುವ ಅಶೋಕ್ ಗೆಹ್ಲೋಟ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ತಮ್ಮ ಬಲಾಬಲ ಪ್ರದರ್ಶಿಸಿದರು.

ರಾಜ್ಯಪಾಲರ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಗೆಹ್ಲೋಟ್ ಅವರು, ಸೋಮವಾರ ವಿಧಾಸಭೆ ಅಧಿವೇಶನ ಕರೆಯಬೇಕೆಂದು ನಾವು ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ. ಹಾಗಾದರೆ ಮಾತ್ರ ಈಗಿನ ಎಲ್ಲಾ ರಾಜಕೀಯ ಅನಿಶ್ಚಿತತೆಗೆ ಸ್ಪಷ್ಟ ಉತ್ತರ ಸಿಗಲಿದೆ. ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ನಾನು ರಾಜ್ಯಪಾಲರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾಗಲೂ ಹೇಳಿದ್ದೆ. ಈಗ ನಾವು ಅವರ ಬಳಿಗೆ ಹೋಗಿ ಒತ್ತಾಯ ಮಾಡುತ್ತೇವೆ ಎಂದರು.

ರಾಜ್ಯಪಾಲರು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ವಿಧಾನಸಭೆ ಅಧಿವೇಶನ ಕರೆಯುತ್ತಿಲ್ಲ. ಅಧಿವೇಶನ ಕರೆದರೆ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ, ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಬಹುದು. ಕೆಲವು ಬಂಡಾಯ ಕಾಂಗ್ರೆಸ್ ಶಾಸಕರು ಹೊರಬಂದು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧವಿದ್ದಾರೆ. ಆದರೆ ಅವರನ್ನು ಹರ್ಯಾಣದ ಹೊಟೇಲ್ ನಲ್ಲಿ ಕೂಡಿಹಾಕಲಾಗಿದೆ ಎಂದು ಆರೋಪಿಸಿದರು.

ಈ ಮಧ್ಯೆ, ಸಚಿನ್ ಪೈಲಟ್ ಸೇರಿದಂತೆ 19 ಕಾಂಗ್ರೆಸ್ ಬಂಡಾಯ ಶಾಸಕರ ವಿರುದ್ಧ ಸದ್ಯಕ್ಕೆ ಸ್ಪೀಕರ್ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಆದೇಶ ನೀಡಿದೆ. (ಎಂ.ಎನ್)

Leave a Reply

comments

Related Articles

error: