ಕರ್ನಾಟಕಮನರಂಜನೆ

‘ಕಿರಿಕ್ ಪಾರ್ಟಿ’ ಶತದಿನಗಳತ್ತ ದಾಪುಗಾಲು : ರೈಟ್ಸ್ ಗಳು ದಾಖಲೆ ಪ್ರಮಾಣದ ಮೊತ್ತದಲ್ಲಿ ಮಾರಾಟ

ಕಳೆದ ಡಿ.30ರಂದು ಬಿಡುಗಡೆಗೊಂಡು ದಕ್ಷಿಣ ಭಾರತ ಚಿತ್ರರಂಗವೇ ಸ್ಯಾಂಡಲ್ ವುಡ್‍ ಕಡೆ ತಿರುಗುವಂತೆ ಮಾಡಿದ ರಕ್ಷಿತ್ ಶೆಟ್ಟಿ ನಿರ್ಮಾಣದ ಕನ್ನಡ ಚಲನಚಿತ್ರ ‘ಕಿರಿಕ್ ಪಾರ್ಟಿ’ ರಾಜ್ಯ ಮಾತ್ರವಲ್ಲದೇ, ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿದೇಶದಲ್ಲಿಯೂ ದಾಖಲೆಯ  ಹೌಸ್‍ಫುಲ್‍ ಪ್ರದರ್ಶನ ಕಂಡು ಚಂದನವನದಲ್ಲಿ ಹೊಸ ಇತಿಹಾಸ ರಚಿಸಲು ದಾಪುಗಾಲಿಡುತ್ತಿದೆ.

ಶತದಿನಗಳ ಬೆರಳಣಿಕೆಯಲ್ಲಿರುವ ಚಿತ್ರ ಗಳಿಕೆಯಲ್ಲಿಯೂ ನೂತನ ದಾಖಲೆ ಬರೆದಿದೆ.  ಅಮೆರಿಕಾ, ಯೂರೋಪ್, ಸೌದಿ,ಸಿಂಗಾಪೂರ್, ದುಬೈ, ಜಪಾನ್, ಇಸ್ರೇಲ್  ಸೇರಿದಂತೆ ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಂಡು ಪ್ರೇಕ್ಷಕರ ಹೃದಯ ಗೆದ್ದಿದ್ದು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸ್ಯಾಂಡಲ್‍ವುಡ್‍ ಚಿತ್ರಗಳು ಯಶಸ್ಸು ಕಾಣುವದು ದುಸ್ತರ ಎಂದು ಗೊಣಗುವ ಚಿತ್ರೋದ್ಯಮಿಗಳಿಗೆ ‘ಕಿರಿಕ್ ಪಾರ್ಟಿ’ ಜೀವಂತ ಉದಾಹರಣೆಯಾಗಿದೆ. ಚಿತ್ರಕಥೆ, ಸಂಭಾಷಣೆ, ಹಿನ್ನಲೆ ಸಂಗೀತ, ನಿರ್ದೇಶನ, ವಾಸ್ತವಕ್ಕೆ ಹತ್ತಿರವಿದ್ದರೆ ಪ್ರತಿ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯಬಲ್ಲವು ಎನ್ನುವುದೇ ಕಿರಿಕ್ ಪಾರ್ಟಿಯ ಪಾಠವಾಗಿದೆ. ನಿರ್ಮಾಪಕನಿಗೆ ಕೋಟ್ಯಾಂತರ ರೂಪಾಯಿ ಲಾಭ ನೀಡುವುದರ ಜೊತೆ ಚಿತ್ರ ತಂಡಕ್ಕೆ ಉತ್ತಮ ಹೆಸರು, ಕೀರ್ತಿ ಲಭಿಸಿದೆ.

ರಾಷ್ಟ್ರೀಯಮಟ್ಟದ ಚಲನಚಿತ್ರೋತ್ಸವ ‘ಐಫಾ-ಉತ್ಸವಂ’ ನಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾದ ಉತ್ತಮ ಸಂಗೀತಕ್ಕೆ ಹಾಗೂ ನೃತ್ಯ ಸಂಯೋಜನೆಗೆ ಪ್ರಶಸ್ತಿಗಳು ಲಭಿಸಿವೆ.

ಟಾಲಿವುಡ್‍ಗೆ ರೀಮೇಕ್ ಹಕ್ಕುಗಳ ಮಾರಾಟ : ಕಿರಿಕ್ ಪಾರ್ಟಿ ರೀಮೇಕಿಂಗ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾದ ಸುದ್ದಿಯೊಂದು ಸ್ಯಾಂಡಲ್‍ವುಡ್‍ ಅಂಗಳದಲ್ಲಿ ಹರಿದಾಡುತ್ತಿದೆ. ದಕ್ಷಿಣ ಭಾರತದ ಚತುರ್ ಭಾಷೆಗಳಲ್ಲಿಯೂ ರೀಮೇಕ್ ಹಕ್ಕುಗಳಿಗೆ ತೀವ್ರ ಪೈಪೋಟಿ ನಡೆದಿದ್ದು ಸದ್ಯಕ್ಕೆ ಟಾಲಿವುಡ್‍ ಚಿತ್ರರಂಗ 50 ಲಕ್ಷ ರೂಪಾಯಿ ನೀಡಿ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದೆ ಎಂದು ನಾಯಕ, ನಿರ್ಮಾಪಕ, ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ.

ಟಾಲಿವುಡ್‍ನ ಖ್ಯಾತ ನಟರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು, ಚಿತ್ರ ನಿರ್ಮಾಣಕ್ಕೆ ಉತ್ಸುಕರಾಗಿರುವುದು ‘ಕಿರಿಕ್ ಪಾರ್ಟಿ’ ರೈಟ್ಸ್ ಗಳು ದಾಖಲೆ ಪ್ರಮಾಣದ ಮೊತ್ತದ ಮಾರಾಟಕ್ಕೆ ಕಾರಣವೆನ್ನಲಾಗಿದೆ. (ಕೆ.ಎಂ.ಆರ್ -ಎಸ್.ಎಚ್)

Leave a Reply

comments

Related Articles

error: