
ಕರ್ನಾಟಕಪ್ರಮುಖ ಸುದ್ದಿ
ಬಿಎಸ್ವೈ ಸರ್ಕಾರಕ್ಕೆ ಒಂದು ವರ್ಷ, ಕೊರೊನಾ ಪಿಡುಗು ರಾಜ್ಯದ ಅಭಿವೃದ್ಧಿಗೆ ಕಂಟಕವಾಯಿತು: ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು,ಜು.27-ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಹೆಜ್ಜೆಯಿಡುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಮ್ಮ ಒಂದು ವರ್ಷದ ಸಾಧನೆಯನ್ನು `ಸವಾಲುಗಳ ವರ್ಷ-ಪರಿಹಾರದ ಸ್ಪರ್ಶ’ ಹೆಸರಿನಲ್ಲಿ ಸಾದರಪಡಿಸುತ್ತಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ಒಂದು ವರ್ಷದ ಸಾಧನೆ ಸಮಾರಂಭದಲ್ಲಿ ಸರ್ಕಾರದ ಸಾಧನೆಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಮಟ್ಟದ ವರ್ಚುವಲ್ ಫ್ಲಾಟ್ಫಾರಂ ಮೂಲಕ ಸಮಾರಂಭವನ್ನು ಆಯೋಜಿಸಲಾಗಿದ್ದು, ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಸಮಾರಂಭದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾಮಾರಿ ಕೊರೊನಾ ವೈರಸ್ ಪಿಡುಗು ರಾಜ್ಯದ ಅಭಿವೃದ್ಧಿಗೆ ಕಂಟಕವಾಯಿತು ಎಂಬ ನೋವು ನನ್ನನ್ನು ಕಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೊರೊನಾ ಪಿಡುಗು ನಮ್ಮನ್ನು ಕಾಡಿಸದೇ ಇದ್ದಿದ್ದರೆ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಮಾಡಬಹುದಿತ್ತು. ಕೋವಿಡ್ ಸಂದರ್ಭದಲ್ಲೂ ಪ್ರಧಾನಿ ಮೋದಿ, ಸಚಿವ ಸಂಪುಟದ ನಾಯಕರುಗಳು, ಶಾಸಕರು, ಪ್ರತಿಪಕ್ಷದ ನಾಯಕರುಗಳು ಹಾಗೂ ಸಂಸತ್ ಸದಸ್ಯರ ಸಹಕಾರದಿಂದ ಕೊಂಚ ಮಟ್ಟಿಗೆ ಅಭಿವೃದ್ಧಿ ಸಾಧಿಸಿದ್ದೇವೆ. ಅಲ್ಲದೆ, ಮಾಡಬೇಕಾದ ಕೆಲಸ ಇನ್ನು ಬಹಳಷ್ಟಿದೆ. ಉಳಿದ ಅವಧಿಯಲ್ಲಿ ಸುಭದ್ರ ಸರ್ಕಾರ ನೀಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.
ಬರಗಾಲ ಅವಧಿಯಲ್ಲಿ ನಾನು ಅಧಿಕಾರಕ್ಕೆ ಬಂದೆ, ಕೆಲವೇ ದಿನಗಳಲ್ಲಿ ಕೆರೆ-ಕಟ್ಟೆ ಹಾಗೂ ಜಲಾಶಯಗಳು ತುಂಬಿ ತುಳುಕಿದವು. ಆದರೆ, ಸಾವಿರಾರು ಗ್ರಾಮಗಳು ಜಲಾವೃತಗೊ0ಡು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದನ್ನು ನಾನು ನೋಡಬೇಕಾಯಿತು. ಬಹುಶಃ ಇದೊಂದು ನನಗೆ ಅಗ್ನಿ ಪರೀಕ್ಷೆಯಂತಾಯಿತು. ಆ ವೇಳೆ ನನ್ನ ಸಚಿವ ಸಂಪುಟ ಸಹೋದ್ಯೋಗಿಗಳು ಇರಲಿಲ್ಲ. ಮೂರು ತಿಂಗಳು ಕಾಲ ಆ ಭಾಗದಲ್ಲಿ ಓಡಾಟ ಮಾಡಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಾಂತ್ವಾನ ನೀಡಿದೆವು. ಅಲ್ಲದೆ, ಪರಿಹಾರ ಹಣವನ್ನು ನೀಡಿದೆವು ಎಂದು ಹೇಳಿದರು.
ನಮ್ಮ ಪ್ರಧಾನಿಯವರ ಕಿಸಾನ್ ಸಮ್ಮಾನ್ ಯೋಜನೆ ಒಂದು ಐತಿಹಾಸಿಕ ಯೋಜನೆಯಾಗಿದೆ. ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ 6 ಸಾವಿರ ರೂ. ಕೊಡುವಂತಹ ಯೋಜನೆಯನ್ನು ತಂದರು. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಇದೇ ಯೋಜನೆಯನ್ನು ಕರ್ನಾಟಕದಲ್ಲೂ ಸಹ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿದ್ದೇವೆ. ಇದಕ್ಕೆ ಪ್ರೇರಣೆ ಪ್ರಧಾನಿ ಮೋದಿಯವರು ಎಂದರು.
ಇದೇ ವೇಳೆ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಲಾಂ ಸೇವೆಯನ್ನು ಸ್ಮರಿಸಿದರು.
ಕೊರೊನಾ ಸಂತ್ರಸ್ತರು ಮತ್ತು ಪ್ರವಾಹ ಸಂತ್ರಸ್ತರ ಜೊತೆ ಸಿಎಂ ಬಿಎಸ್ವೈ ನೇರ ಪ್ರಸಾರದ ಮೂಲಕ ಸಂವಾದ ನಡೆಸಿದ್ದಾರೆ. ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಪ್ಪಳ ಜಿಲ್ಲೆಗಳ ಸಂತ್ರಸ್ತರು ಸಿಎಂ ಜೊತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಇದೇ ವೇಳೆ ಸಂತ್ರಸ್ತರು ಸರ್ಕಾರದ ಸಹಾಯಕ್ಕೆ ವಿಡಿಯೋ ಸಂವಾದದ ಮೂಲಕ ಧನ್ಯವಾದ ಹೇಳಿದ್ದಾರೆ. ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆಯನ್ನು ಯಡಿಯೂರಪ್ಪ ಅವರು ನೀಡಿದರು.
ಸಮಾರಂಭದಲ್ಲಿ ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಜಿಲ್ಲಾ ಮಟ್ಟದಲ್ಲಿ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ್ದಾರೆ. (ಎಂ.ಎನ್)