ಪ್ರಮುಖ ಸುದ್ದಿಮೈಸೂರು

ಮೂರು  ತಿಂಗಳ ಲಾಕ್‌ಡೌನ್ ಬಳಿಕ ಕಾಕನಕೋಟೆ ಸಫಾರಿ ಪುನರಾರಂಭ : ಮೊದಲ ಸಫಾರಿಯಲ್ಲೇ ಹುಲಿಯ ದರ್ಶನ

ಮೈಸೂರು,ಜು.27:- ಮೂರು  ತಿಂಗಳ ಲಾಕ್‌ಡೌನ್ ಬಳಿಕ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯಲ್ಲಿರುವ  ಕಾಕನಕೋಟೆ ಸಫಾರಿ ಎಂದಿನಂತೆ ಪುನರಾರಂಭವಾಗಿದ್ದು, ಸಫಾರಿ ಕೇಂದ್ರಕ್ಕೆ ತಹಶೀಲ್ದಾರ್ ಆರ್.ಮಂಜುನಾಥ್, ಮತ್ತು ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್‌ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಾಗರಹೊಳೆಯ ಕಾಕನಕೋಟೆ ಸಫಾರಿಯು ಹೆಚ್ಚು ಬೇಡಿಕೆಯಿಂದ ಕೂಡಿದ್ದು, ಹೆಚ್ಚು ಜನರು ಬರುವ ನಿರೀಕ್ಷೆಯಲ್ಲಿ ಸಫಾರಿ ಕೇಂದ್ರದ ಆವರಣದಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಯಿತು. ವಲಯ ಅರಣ್ಯಧಿಕಾರಿ ಸಿದ್ದರಾಜು ಅವರ ನೇತೃತ್ವದಲ್ಲಿ ಪ್ರಾರಂಭವಾದ ಸಫಾರಿಯಲ್ಲಿ ಸರ್ಕಾರದ ನಿಯಮದಂತೆ ಪ್ರತಿ ಬಸ್‌ನಲ್ಲಿ 13 ಜನರಂತೆ 35 ಜನರಿಗೆ ಸಫಾರಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಫಾರಿ ಪ್ರಾರಂಭಕ್ಕೂ ಮೊದಲೇ ಹೆಚ್.ಡಿ.ಕೋಟೆ ತಾಲೂಕಿನ ಆಡಳಿತ ಮಂಡಳಿ ಸಫಾರಿ ಕೇಂದ್ರಕ್ಕೆ ಭೇಟಿ ನೀಡಿ ಮುಂಜಾಗೃತಾ ಕ್ರಮಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಲ್ಲದೇ ಪ್ರತಿ ಬಸ್‌ಗೂ ಸಫಾರಿ ಹೊರಡುವ ಮುನ್ನ ಸ್ಯಾನಿಟೈಸರ್ ಸಿಂಪಡಿಸಬೇಕು. ಸಫಾರಿ ಮುಗಿದ ನಂತರವು ಸಹ ಸ್ಯಾನಿಟೈಸರ್ ಸಿಂಪಡಿಸಬೇಕು  ಹಾಗೂ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಸಿಬ್ಬಂದಿಗಳ ಯಾರೂ ಸಹ ಪ್ರವಾಸಿಗರೊಡನೆ ಸಂಪರ್ಕಕ್ಕೆ ಹೋಗಬಾರದು. ಸಿಬ್ಬಂದಿಗಳು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಿದರು.

ನಂತರ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ವಲಯ ಅರಣ್ಯಧಿಕಾರಿ ಸಿದ್ದರಾಜು  ಸಿಬ್ಬಂದಿಗಳು ಆದಷ್ಟು ಪ್ರವಾಸಿಗರ ಸಂಪರ್ಕಕ್ಕೆ ಹೋಗದಂತೆ ಗಮನ ಹರಿಸಬೇಕು ಹಾಗೂ ಬಸ್ ನಲ್ಲಿರುವ ಪ್ರವಾಸಿಗರು ಎದ್ದು ಓಡಾಡದಂತೆ ನೋಡಿಕೊಳ್ಳಬೇಕು, ಟಿಕೇಟ್ ವಿತರಿಸುವ ಸಂದರ್ಭದಲ್ಲಿ ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ನೋಡಿಕೊಳ್ಳಬೇಕು ಎಂದರು.

ಒಂದು ಸೂಕ್ಷ್ಮವಲಯ ಅಲ್ಲಿರುವ ಜೀವ ಸಂಕುಲಕ್ಕೆ ಯಾವುದೇ ತೊಂದರೆಯಾಗದಂತೆ ನಾವು ಜಾಗೃತರಾಗಿ ಕೆಲಸ ನಿರ್ವಹಿಸಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.

ಮೊದಲ ಸಫಾರಿಯಲ್ಲೇ ಹುಲಿಯ ದರ್ಶನ

ಮೂರು ತಿಂಗಳು ಬಳಿಕ ಪ್ರಾರಂಭವಾದ ಮೊದಲ ಸಫಾರಿಯಲ್ಲೇ ಪ್ರವಾಸಿಗರಿಗೆ ಹುಲಿಯ ದರ್ಶನ ಭಾಗ್ಯ ಸಿಕ್ಕಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಕಾಲ ಕಳೆದಿದ್ದ ಕಣ್ಣುಗಳಿಗೆ ಇಂದಿನ ಸಫಾರಿ ಹಚ್ಚ ಹಸಿನ ಅರಣ್ಯ ಸೌಂದರ್ಯವನ್ನು ಕಣ್ತುಂಬುವಂತೆ ಮಾಡಿದೆ. ಅಲ್ಲದೇ ಸಫಾರಿಯಲ್ಲಿ ಪ್ರವಾಸಿಗರು ಹುಲಿ, ಜಿಂಕೆ, ಕಾಡೆಮ್ಮೆ, ಆನೆ ಹಾಗೂ ವಿವಿಧ ಜಾತಿಯ ಹದ್ದುಗಳು ಮತ್ತು  ಪಕ್ಷಿಗಳನ್ನು ನೋಡಿ ಸಂತಸ ಪಟ್ಟು, ತಮ್ಮ ಕ್ಯಾಮೆರಗಳಲ್ಲಿ ಸೆರೆಹಿಡಿದುಕೊಂಡರು. .

ಸಫಾರಿಯ ಪ್ರಾರಂಭಕ್ಕೂ ಮೊದಲು ಹಾಗೂ ಸಫಾರಿ ಮುಗಿದ ನಂತರವು ಪ್ರತಿ ವಾಹನಕ್ಕೆ ಸ್ಯಾನಿಟೈಸರ್ ಮಾಡಲಾಗುವುದು ಹಾಗೂ ನಮ್ಮ ಸಿಬ್ಬಂದಿಗಳಿಗೆ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಕಡಿಮೆ ಜನರಿಗೆ ಮಾತ್ರ ಸಫಾರಿಯಲ್ಲಿ ಅವಕಾಶವಿದ್ದು ಪ್ರವಾಸಿಗರು ಇಲಾಖೆಯೊಂದಿಗೆ ಸಹಕರಿಸಬೇಕಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದರು.

ಲಾಕ್‌ಡೌನ್ ಬಳಿಕ ಮೊದಲ ಸಫಾರಿ ನಿಜಕ್ಕೂ ಬಹಳ ಸಂತೋಷ ತಂದಿದೆ. ಮೊದಲ ಸಫಾರಿಯಲ್ಲೇ ಹುಲಿ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಅಲ್ಲದೇ ಅಲವು ದಿನಗಳ ಬಳಿಕ ಕಾಡನ ಸೌಂದರ್ಯ ಸವಿದದ್ದು ಎಲ್ಲವುದಕ್ಕಿಂತ ಸಂತಸದ ವಿಚಾರವಾಗಿದೆ ಎಂದು ಪ್ರವಾಸಿಗ ದೀಕ್ಷಿತ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: