ಮೈಸೂರು

ರೋಗ ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತಿದೆ : ಡಾ.ಬಿ.ಸುರೇಶ್

ಸಣ್ಣಪುಟ್ಟ ಕಾಯಿಲೆಗೂ ರೋಗ ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸಬೇಕಿದೆ ಎಂದು ಭಾರತೀಯ ಫಾರ್ಮಸಿ ಕೌನ್ಸಿಲ್‍ನ ಅಧ್ಯಕ್ಷ  ಡಾ.ಬಿ.ಸುರೇಶ್ ಅಭಿಪ್ರಾಯಪಟ್ಟರು.

ಮೈಸೂರಿನ ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ ಗುರುವಾರ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ರಜತ ಮಹೋತ್ಸವ ಉಪನ್ಯಾಸ ಮಾಲಿಕೆಯನ್ನು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಪೂರ್ವಜರಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿತ್ತು. ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸಿ ನೂರಾರು ವರ್ಷ ಬದುಕುತ್ತಿದ್ದರು. ಆದರೆ ಇಂದಿನ ಜನರಲ್ಲಿ ರೋಗನಿರೋಧಕ ಶಕ್ತಿಯೇ ಇಲ್ಲದಂತಾಗಿದೆ. ನೆಗಡಿ, ತಲೆ ನೋವು ಬಂದರೂ ರೋಗ ನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ದೇಹದ ಆಂತರಿಕ ಶಕ್ತಿ ಕುಂದುತ್ತದೆ. ಹಾಗಾಗಿ ಎಲ್ಲದಕ್ಕೂ ಮಾತ್ರೆಗಳ ಮೊರೆ ಹೋಗದೆ ನೈಸರ್ಗಿಕವಾಗಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಫಾರ್ಮಸಿ ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಕೇವಲ ಔಷಧಗಳನ್ನು ತಯಾರಿಸಿ ಸರಬರಾಜು ಮಾಡದೆ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವ ದಿಕ್ಕಿನಲ್ಲಿ ಶ್ರಮಿಸುತ್ತಿದೆ. ದೇಶದ ಸಾರ್ವಜನಿಕರಿಗೆ ಏನು ಬೇಕು, ಏನು ಬೇಡ ಎಂಬುದನ್ನು ಅರಿತು ಔಷಧಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರಲ್ಲಿನ ಆರೋಗ್ಯ ಮಟ್ಟವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಭಾರತ ಸಂಶೋಧಿಸಿದ ಚುಚ್ಚುಮದ್ದು ಆಫ್ರಿಕಾ ರಾಷ್ಟ್ರಕ್ಕೆ ನೆರವಾಗಿದ್ದು ಭಾರತವನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುವಂತೆ ಫಾರ್ಮಸಿ ಕ್ಷೇತ್ರ ಮಾಡಿದೆ ಎಂದು ಹೇಳಿದರು.

ಇದೇ ವೇಳೆ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಡಾ.ಸಿ.ಎನ್.ಮಂಜುನಾಥ್ ಭಾರತದ ಹೃದ್ರೋಗ ಸಮಸ್ಯೆಗಳ ಸ್ಥಿತಿಗತಿಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎನ್.ಪಾರ್ಥಸಾರಥಿ, ಗಾರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್, ಪ್ರಾಂಶುಪಾಲ ಹನುಮಂತಾಚಾರ್ ಜೋಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  (ಬಿಎಂ-ಎಸ್.ಎಚ್)

Leave a Reply

comments

Related Articles

error: