ಮೈಸೂರು

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ,ಕಾರ್ಮಿಕ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಮೈಸೂರು,ಜು.28:- ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ ಮತ್ತು ಕಾರ್ಮಿಕ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕಳೆದ 18ದಿನಗಳಿಂದ 42ಸಾವಿರ ಆಶಾಕಾರ್ಯಕರ್ತೆಯರು ಗೌರವಧನ 12000ನಿಗದಿಗಾಗಿ ಆಗ್ರಹಿಸಿ,  ರಕ್ಷಣಾಕಿಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಇಲ್ಲಿಯವರೆಗೂ ಆಶಾ ಹೋರಾಟಕ್ಕೆ ಸ್ಪಂದಿಸಿ ಆಶಾಗಳ ಬೇಡಿಕೆ ಈಡೇರಿಸಿಲ್ಲ. ನಾವೂ ಕೂಡ ಆಶಾಕಾರ್ಯಕರ್ತೆಯರನ್ನು ಬೆಂಬಲಿಸುತ್ತಿದ್ದು ತಕ್ಷಣವೇ ರಾಜ್ಯದ ಆಶಾಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಿ ಅವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಕೋವಿಡ್-19 ಸಂದರ್ಭದಲ್ಲೇ ರಾಜ್ಯ ಸಚಿವ ಸಂಪುಟ ಸುಗ್ರೀವಾಜ್ಞೆಗೆ ಮುಂದಾಗಿ ಕಾರ್ಮಿಕರ ವಿರುದ್ಧವಾದ ನೀತಿಗಳನ್ನು ಜಾರಿಗೆ ತಂದಿದ್ದು ಫಿಕ್ಸಡ್ ಟರ್ಮ್ ಎಂಪ್ಲಾಯ್ ಮೆಂಟ್ ನ್ನು ತಿದ್ದುಪಡಿ ಮಾಡಿ ರಾಜ್ಯದಲ್ಲಿ ಜಾರಿಗೆ ತಂದಿದೆ. ಮಾಸಿಕ ದುಡಿತದ ಅವಧಿಯನ್ನು 75ಗಂಟೆಯಿಂದ 125ಗಂಟೆಗಳಿಗೆ ಹೆಚ್ಚಿಸಿರುವುದು ಹಿಂದಿನ ಜೀತಪದ್ಧತಿಗೆ ಕಾರ್ಮಿಕರು ಮರಳಿದಂತಾಗಿದೆ. ಇದು ಶೋಷಣೆಯ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಅನುಸೂಚಿತ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ವ್ಯತ್ಯಸ್ತ ತುಟ್ಟಿಭತ್ಯೆಯನ್ನು ಒಂದು ವರ್ಷದ ಅವಧಿಗೆ ತಡೆ ಹಿಡಿಯಲಾಗಿದೆ. ಇದರಿಂದ ಅವರಿಗೆ ದೊರಕುತ್ತಿದ್ದ ಪುಡಿಗಾಸಿನ ಹೆಚ್ಚಳವೂ ಇಲ್ಲವಾಗಿದೆ. ಹಾಗಾಗಿ ಎಲ್ಲಾ ತಿದ್ದುಪಡಿಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎನ್.ಮುದ್ದುಕೃಷ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: