ಮೈಸೂರು

ನಿಯಮ ಉಲ್ಲಂಘಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ಚುನಾವಣೆ: ಕ್ರಿಮಿನಲ್ ಕೇಸ್ ದಾಖಲು; ಡಿಸಿ ಅಭಿರಾಮ್ ಜಿ.ಶಂಕರ್

ಮೈಸೂರು,ಜು.29-ಸರ್ಕಾರದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದವರು  ಚುನಾವಣೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನಿಯಮ ಉಲ್ಲಂಘಿಸಿ ಚುನಾವಣೆ ನಡೆಸಿರುವುದು ಗಮನಕ್ಕೆ ಬಂದರೆ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಂಘ ಸಂಸ್ಥೆ, ಕೋ ಆಪರೇಟಿವ್ ಸೊಸೈಟಿಗಳು ಚುನಾವಣೆ ನಡೆಸಬಾರದು ಎಂದು ಆದೇಶಿಸಿದ್ದೇವೆ. ಆದರೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದವರು ನಿಯಮ ಉಲ್ಲಂಘಿಸಿ ಚುನಾವಣೆ ಮಾಡಿದ್ದಾರೆ ಎಂದು ಮಾಧ್ಯಮದವರಿಂದ ತಿಳಿದುಬಂದಿದೆ. ಇಬ್ಬರು ವಿಡಿಯೋ ಕೂಡ ಕಳುಹಿಸಿಕೊಟ್ಟಿದ್ದಾರೆ. ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಲೋಪಗಳಿದ್ದರೆ ಅಧಿಕಾರಿ ಇರಲಿ, ನೌಕರ ಇರಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಚುನಾವಣೆ ನಡೆಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಪಾಲಿಕೆಯಲ್ಲಿ ಅನುಮತಿ ಕೇಳಿಲ್ಲ. ಚುನಾವಣೆ ನಡೆಸಲು ಅನುಮತಿ ಕೇಳುತ್ತಿರುವವರಿಗೆ ಅನುಮತಿ ನಿರಾಕರಿಸಲಾಗುತ್ತಿದೆ. ಇವರು ಅನುಮತಿ ಕೇಳದೆ ಚುನಾವಣೆ ನಡೆಸಿದ್ದಾರೆ. ಜೊತೆಗೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಚುನಾವಣೆ ಮಾಡಲಾಗಿದೆ. ಕಾರ್ಮಿಕ ಆಯುಕ್ತರು ಒಪ್ಪಿಗೆ ನೀಡಿದ್ದಾರೆ ಅಂತ ಹೇಳಿಕೊಂಡಿರುವುದು ತಿಳಿದುಬಂದಿದೆ. ಆದರೆ ಜಿಲ್ಲಾಡಳಿತಕ್ಕೆ ಇದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಜಿಲ್ಲಾಧಿಕಾರಿಗಳ ಆದೇಶವನ್ನು ಲೆಕ್ಕಿಸದೆ ತನ್ನ 21ನೇ ತ್ರೈಮಾಸಿಕ ಮಹಾ ಅಧಿವೇಶನಕ್ಕೆ ಪ್ರಾಥಮಿಕ ಸಮಿತಿ ಪ್ರತಿನಿಧಿ ಆಯ್ಕೆಯ ಚುನಾವಣೆ ನಡೆಸಿದೆ. ಜು.24ರಂದೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿತ್ತು. ಜು.27ರಂದು ನಾಮಪತ್ರ ಸಲ್ಲಿಕೆ ಅಂತಿಮಗೊಂಡಿತ್ತು. ಇಂದು ಬೆಳಿಗ್ಗೆ 9 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಸಂಜೆ 4.30ರವರೆಗೆ ನಡೆಯಲಿದೆ. ನಗರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ 10 ಕಚೇರಿಗಳಿದ್ದು ಎಲ್ಲ ಕಚೇರಿಗಳಲ್ಲೂ ಚುನಾವಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: