ಪ್ರಮುಖ ಸುದ್ದಿಮೈಸೂರು

ತುಂಬಿದ ಕೊಡ ತುಳುಕಲ್ಲ, ಖಾಲಿಡಬ್ಬ ಮಾತ್ರ ಶಬ್ದಮಾಡೋದು; ಬಿಜೆಪಿ ಸರ್ಕಾರವನ್ನು ಖಾಲಿ ಡಬ್ಬಕ್ಕೆ ಹೋಲಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು,ಜು.30:- ಯಡಿಯೂರಪ್ಪ ಬಹಳ ವಿಜೃಂಭಣೆಯಿಂದ ವರ್ಷದ ಸಂಭ್ರಮ ಆಚರಿಸಿದ್ದಾರೆ. ಎಲ್ಲಾ ಮಾಧ್ಯಮಗಳಲ್ಲೂ ಜಾಹೀರಾತು ನೀಡಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ, ಖಾಲಿ ಡಬ್ಬ ಮಾತ್ರ ಶಬ್ದ ಮಾಡೋದು ಎಂದು  ಬಿಜೆಪಿ ಸರ್ಕಾರವನ್ನು ಖಾಲಿ ಡಬ್ಬಕ್ಕೆ ಹೋಲಿಸಿ  ಮಾಜಿ ಸಿಎಂ,ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ  ವ್ಯಂಗ್ಯವಾಡಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ  ಬಿಎಸ್ ಯಡಿಯೂರಪ್ಪನವರು ವರ್ಷದ ಸಾಧನೆ ಕೈಪಿಡಿ ಬಿಡುಗಡೆ ಮಾಡಿದ್ದಾರೆ. ಅದರ ಜೊತೆಗೆ ಚುನಾವಣಾ ಪ್ರಣಾಳಿಕೆಗಳನ್ನು ಸೇರಿಸಬೇಕಿತ್ತು. ಆಗ ನಿಜವಾದ ಸಾಧನೆ ಗೊತ್ತಾಗುತ್ತಿತ್ತು ಎಂದರು. ಬಿಜೆಪಿ ಸರ್ಕಾರ ಅನೈತಿಕ ವಾಗಿ ಅಧಿಕಾರಕ್ಕೆ ಬಂದಿದೆ.  ಜನರ ಆಶೀರ್ವಾದ ಪಡೆದು ಬಂದ ಸರ್ಕಾರ ಇದಲ್ಲ. ಇವರಿಗೆ ಬಹುಮತ ಬಂದಿರಲಿಲ್ಲ,  ಗೆದ್ದದ್ದು 104 ಸ್ಥಾನಗಳು‌ ಮಾತ್ರ. ಬಹುಮತ ಸಾಬೀತು ಮಾಡಲು ಇವರಿಗೆ ಅವಕಾಶ ಇರಲಿಲ್ಲ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದಾರೆ. ರಾಜ್ಯದಲ್ಲಿ ಅನೈತಿಕ ರಾಜಕಾರಣ ಸೃಷ್ಟಿಯಾಗಿದ್ದು ಯಡಿಯೂರಪ್ಪನವರಿಂದ. ಅಕ್ರಮ ಹಣದಿಂದ ಎಂಎಲ್ ಎ ಗಳನ್ನು ಕೊಂಡುಕೊಂಡು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಇದು ಯಡಿಯೂರಪ್ಪನವರ ಸರ್ಕಾರದ  ವರ್ಷಧ ಸಾಧನೆ ಎಂದು ಕಿಡಿಕಾರಿದರು.

ಆ ಹಣದಲ್ಲಿ ನಮ್ಮ 14ಶಾಸಕರು, ಜೆಡಿಎಸ್‌ನ ಮೂವರನ್ನು ಖರೀದಿ ಮಾಡಿದ್ರು. ಈಗ ರಚನೆಯಾಗಿರೋ ಸರ್ಕಾರ ಒಂದು ಅನೈತಿಕ‌ ಕೂಸು. ಇವರಿಗೆ ಸಂವಿಧಾನ ಬಗ್ಗೆ ಗೌರವ ಇಲ್ಲ. ಅಕ್ರಮವಾಗಿ ಮಾಡಿರೋ ಹಣದಿಂದ ಆಪರೇಷನ್ ಮಾಡಿದ್ದಾರೆ. ಆವತ್ತು ಶ್ರೀನಿವಾಸ ಗೌಡ ಅಸೆಂಬ್ಲಿಯಲ್ಲೇ‌ ಹೇಳಿದ್ರು. ನನ್ನ ಮನೆಗೆ 5ಕೋಟಿ‌ ತಂದು’ ಮುಂದೆ 20ಕೋಟಿ‌ ಕೊಡ್ತೀವಿ ಅಂದಿದ್ದಾರೆ ಅಂತ. ಇದನ್ನು ವಿಧಾನಸಭೆಯಲ್ಲಿ ಖುದ್ದು ಶ್ರೀನಿವಾಸ್ ಗೌಡರೆ ಹೇಳಿದ್ರು. ಇವರಿಗೆ ಇಷ್ಟೆಲ್ಲ ಕೊಡಲು ಹಣ ಹೇಗೆ ಬಂತು.? ಇದೆಲ್ಲಾ ಅಕ್ರಮವಾಗಿ ಮಾಡಿರೋ‌ ಹಣದಿಂದ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

ಕೇಂದ್ರದಿಂದ 1800ಕೋಟಿ ಕೊಟ್ಟಿದ್ದಕ್ಕೆ ರಾಜಾಹುಲಿ ಎಂದು ಬೀಗಿದ್ರು. ಈ ನೆರೆ ಪರಿಹಾರಕ್ಕೆ‌ ನಾವು ಸಾಧನೆ ಅಂತ ಕರೀಬೇಕಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ನೆರೆ ಪೀಡಿತರಿಗೆ ಈ ವರೆಗೂ ಸರಿಯಾದ ಮನೆ ಆಗಿಲ್ಲ.  ನೆರೆ  ನಿರ್ವಹಣೆಯಲ್ಲಿ  ಸರ್ಕಾರ ಟೋಟಲಿ ಫೇಲ್ ಆಗಿದೆ. ಇದರ ಮಧ್ಯೆ ಉಪ ಚುನಾವಣೆಯಲ್ಲಿ ಯದ್ವಾತದ್ವಾ ದುಡ್ಡು ಖರ್ಚು ಮಾಡಿದ್ರು. ಒಂದೊಂದು ಉಪ‌ಚುನಾವಣೆಗೆ 20, 25ಕೋಟಿ ಖರ್ಚು ಮಾಡಿದ್ದಾರೆ. ಇನ್ನು ಕೆಲವು ಕಡೆ 50 ರಿಂದ 60ಕೋಟಿ ಖರ್ಚು ಮಾಡಿದ್ದಾರೆ. ಇದನ್ನೆಲ್ಲ ಬಿಜೆಪಿ ಯವರು ಸಾಧನೆ ಅಂತಿದ್ದಾರೆ ಎಂದರು.

ಕೊರೋನಾ ಹಗರಣದ ಬಗ್ಗೆ ನಾನು ಡಿಕೆಶಿವಕುಮಾರ್ ಇಬ್ಬರು ಪ್ರೆಸ್ಮೀಟ್ ಮಾಡಿದ್ವಿ. ಆ‌ ಸಂಜೆಯೇ ಐವರು ಸಚಿವರು ಬಂದು‌ ಪ್ರೆಸ್ಮೀಟ್ ಮಾಡಿದ್ರು. ನೋಡಿ ಎಷ್ಟು ಭಯ ಇದೆ ಅವ್ರಿಗೆ ಅಂತ ಎಂದು ಬಿಜೆಪಿ ಸಚಿವರ ಬಗ್ಗೆ ವ್ಯಂಗ್ಯವಾಡಿದರು. ಇಲಾಖೆಯ ಅಧಿಕಾರಿಗಳನ್ನು ಒಗ್ಗೂಡಿಸಿ ಪ್ರೆಸ್ಮೀಟ್ ಮಾಡಿದ್ರು. ಪ್ರೆಸ್ಮೀಟ್ ವೇಳೆ‌ ಬಿಜೆಪಿ ಹೇಳಿದ ಲೆಕ್ಕವೇ ಬೇರೆ. ಅದಕ್ಕೂ ಮುನ್ನ ಬಿಜೆಪಿ ಹೇಳಿದ ಲೆಕ್ಕವೇ ಬೇರೆ ಎಂದು ಬಿಜೆಪಿ  ಕೊರೋನಾ‌ ಲೆಕ್ಕದ ಅಕ್ರಮದ ಬಗ್ಗೆ ಮತ್ತೆ ಆರೋಪಿಸಿದರು.

ಈ ಸಂದರ್ಭ ಶಾಸಕ ತನ್ವೀರ್‌ಸೇಠ್, ಎಂಎಲ್‌ಸಿ ಧರ್ಮಸೇನ ,ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: