ಪ್ರಮುಖ ಸುದ್ದಿಮೈಸೂರು

ಆಮ್ ಆದ್ಮಿ ಪಕ್ಷ ಕರ್ನಾಟಕದ ನೂತನ ಉಸ್ತುವಾರಿಯಾಗಿ  ಕಪಿಲ್ ಭಾರದ್ವಾಜ್ ನೇಮಕ

ಮೈಸೂರು,ಜು.31:- ದೆಹಲಿ ಚುನಾವಣಾ ವಿಜಯದ ನಂತರ ಆಮ್ ಆದ್ಮಿ ಪಕ್ಷವು ರಾಷ್ಟ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಹೊರಟಿದ್ದು, ಇದರ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿನ ಘಟಕಗಳಲ್ಲಿ ಸಂಘಟನೆಯ ಪುನರ್ ರಚನೆ ಮಾಡುತ್ತಿದೆ. ಅಂತೆಯೇ ಆಮ್ ಆದ್ಮಿ ಪಕ್ಷ ಕರ್ನಾಟಕದ ನೂತನ ರಾಜ್ಯ ಉಸ್ತುವಾರಿಯಾಗಿ ಆಮ್ ಆದ್ಮಿ ಪಕ್ಷದ ಭರವಸೆಯ ಯುವ ನಾಯಕ, ಚುನಾವಣಾ ತಂತ್ರಜ್ಞ, ದೆಹಲಿಯ ಗ್ರಾಹಕ ಸಹಕಾರ ಸಂಘದ ಅಧ್ಯಕ್ಷರಾದ ಕಪಿಲ್  ಭಾರದ್ವಾಜರನ್ನು ಪಕ್ಷದ ರಾಷ್ಟೀಯ ವ್ಯವಹಾರಗಳ ಸಮಿತಿ ನೇಮಿಸಿದೆ ಎಂದು ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ತಿಳಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು  ಕಪಿಲ್ ಭಾರದ್ವಾಜ್ ರವರು ಯುಎಸ್ಎಯಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ ಕೆಲವು ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿ, ತಮ್ಮದೇ ಆದ ಸಾಫ್ಟ್ವೇರ್ ಉದ್ಯಮವನ್ನು ಆರಂಭಿಸಿದ್ದಾರೆ. 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಸಮಿತಿ ಹಾಗೂ ಬೂತ್ ಮ್ಯಾನೇಜ್ಮೆಂಟ್ ನ ಉಸ್ತುವಾರಿಯಾಗಿದ್ದರು. ನಂತರ 2017ಪಂಜಾಬ್ ವಿಧಾನಸಭೆ ಚುನಾವಣೆ ಹಾಗೂ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಸಮಿತಿಯ ಪ್ರಮುಖ ಸದಸ್ಯರಾಗಿದ್ದರು. ಫೆಬ್ರವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮತ್ತು ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ಪಕ್ಷದ ಗೆಲುವಿನ ರೂವಾರಿಯಾಗಿದ್ದರು.

ಕಪಿಲ್ ಭಾರದ್ವಾಜ್ ರವರ ನೇಮಕವನ್ನು ಹರ್ಷದಿಂದ ಸ್ವಾಗತಿಸಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು, ದೆಹಲಿಯ ಜನಪರ ಆಡಳಿತದ ಮಾದರಿಯು ನಮ್ಮ ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಈ ಕನಸು ಕೈಗೂಡಲು ಕಪಿಲ್ ಭಾರದ್ವಾಜ್ ಜೊತೆಗೆ ಪಕ್ಷವು ಶ್ರಮಿಸಲಿದೆ ಎಂದು ಹಾರೈಸಿದ್ದಾರೆ.

ನೇಮಕಾತಿಯ ನಂತರ ಕನ್ನಡಲ್ಲೇ ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ ಕಪಿಲ್,  ಕಾರ್ಯಕರ್ತರೊಂದಿಗೆ ಮಾತನಾಡಿ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಆಡಳಿತದಲ್ಲಿ ಮತ್ತು ಕೋವಿಡ್ 19೯ ಸೋಂಕು ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಕೇವಲ ಲೂಟಿಯೊಂದೇ ಗುರಿಯಾಗಿಟ್ಟುಕೊಂಡಿರುವ ಈ ಸರಕಾರವು ಕರ್ನಾಟಕದ ಹೆಸರನ್ನು ಹಾಳುಗೆಡವುತ್ತಿದೆ ಎಂದರು. ಈ ಬಾರಿ ಬಿಬಿಎಂಪಿಯಲ್ಲಿ ಆಮ್ ಆದ್ಮಿ ಪಕ್ಷದ ಆಡಳಿತ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: