ಕರ್ನಾಟಕಪ್ರಮುಖ ಸುದ್ದಿ

ಮಂಗಳೂರಿಗೆ ತೆರಳಿ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮಂಗಳೂರು,ಜು.31-ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಮಂಗಳೂರಿಗೆ ಬಂದಿದ್ದು, ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾದರು.ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಡಿಕೆಶಿ ಜಿಲ್ಲೆಗೆ ಬಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಜಿಲ್ಲೆಗೆ ಬಂದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇವರನ್ನು ಮಾಜಿ ಸಚಿವ ಯು.ಟಿ ಖಾದರ್, ಮಾಜಿ ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಹರೀಶಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ‌ ಅಧ್ಯಕ್ಷ ಮಿಥುನ್ ರೈ ಸ್ವಾಗತಿಸಿದರು.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕಾಂಗ್ರೆಸ್ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಇಡೀ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿ. ಎಲ್ಲ 224 ಮಂದಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ ಅವರು ಕೇವಲ 15 ಶಾಸಕರನ್ನು ಮಾತ್ರ ಯಾಕೆ ಹೇಳುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಬಿಜೆಪಿ ಎಷ್ಟು ಶಾಸಕರನ್ನಾದರೂ ತಮ್ಮ ಬಳಿ ಸೇರಿಸಿಕೊಳ್ಳಲಿ. ನಮ್ಮ ಗುರಿ ಪಕ್ಷ ಸಂಘಟನೆ. ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರೊಂದಿಗೆ ಇದೆ. ದೇಶದಾದ್ಯಂತ ನಮ್ಮ ಕಾರ್ಯಕರ್ತರ ಸಹಾಯದಿಂದ ಪಕ್ಷವನ್ನು ಬಲಪಡಿಸುತ್ತೇವೆ ಎಂದು ತಿರುಗೇಟು ನೀಡಿದರು.

ಕರ್ನಾಟಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ದಕ್ಷಿಣ ಕನ್ನಡಕ್ಕೆ ಇದು ನನ್ನ ಮೊದಲ ಭೇಟಿ. ಇದು ಅದ್ಭುತ ಜಿಲ್ಲೆಯಾಗಿದ್ದು ಈ ಸ್ಥಳವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಹೆಸರುವಾಸಿಯಾಗಿದೆ. ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಕೊರೊನಾ ಕಾರಣದಿಂದ ಪ್ರಯಾಣ ಮಾಡಲು ಸಾಧ್ಯವಾಗಿಲ್ಲ. ಈಗ ನನಗೆ ರಾಜಕೀಯಕ್ಕೆ ಉತ್ತೇಜನ ನೀಡಿದ ಹಾಗೂ ಹಿರಿಯ ನಾಯಕರಾದ ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಅವರ ಆಶೀರ್ವಾದ ಪಡೆಯಲು ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು.

ಆ ಬಳಿಕ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅನಾರೋಗ್ಯದಿಂದ ಆಸ್ಕರ್ ಫರ್ನಾಂಡಿಸ್ ಅವರು ಶಿವಕುಮಾರ್ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಇದೇ ಸಂದರ್ಭದಲ್ಲಿ ಪಕ್ಷದ‌ ಸಂಘಟನೆಗಾಗಿ ಆಸ್ಕರ್ ಅವರ ಸಲಹೆಯನ್ನೂ ಶಿವಕುಮಾರ್ ಪಡೆದರು.

ಬಿಷಪ್ ಹೌಸ್ ನಲ್ಲಿ ಬಿಷಪ್ ರೆ‌.ಡಾ.ಪೀಟರ್ ಪಾವ್ಲ್ ಸಲ್ಡಾನ ಅವರನ್ನು ಭೇಟಿ ಮಾಡಿದರು. ಕಂಕನಾಡಿಗೆ ತೆರಳಿ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ನಂತರ ರಿಕ್ಷಾ ಚಾಲಕರಿಗೆ ಮಾಸ್ಕ್, ಸ್ಯಾನಿಟೈಸರ್ ಕಿಟ್ ವಿತರಿಸಿದರು.

ಕೋವಿಡ್ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿರುವ ಪಕ್ಷದ 60 ಮಂದಿ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಲಿದ್ದು, ಮಧ್ಯಾಹ್ನ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ಧರ್ಮಸ್ಥಳಕ್ಕೆ ತೆರಳಲಿದ್ದು, ಶುಕ್ರವಾರ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. (ಎಂ.ಎನ್)

 

Leave a Reply

comments

Related Articles

error: