ಪ್ರಮುಖ ಸುದ್ದಿ

ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ

ರಾಜ್ಯ( ಮಡಿಕೇರಿ) ಆ.1 :- ಹಾರಂಗಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಹಾರಂಗಿ ಜಲಾಶಯದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ನಾಡಿನಲ್ಲಿ ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ಕೃಷಿಕರಲ್ಲಿ ಸಮೃದ್ಧಿ ತರುವಂತಾಗಲಿ ಎಂದು ಅವರು ಆಶಿಸಿದರು.
ಕೃಷಿ ಬೆಳೆಗಾಗಿ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ಒಟ್ಟು 1900 ಕ್ಯುಸೆಕ್ ನೀರನ್ನು ಹರಿಯ ಬಿಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ರಾಜ್ಯ ಹಾಗೂ ತಮಿಳುನಾಡಿಗೆ ಕುಡಿಯಲು ಮತ್ತು ಕೃಷಿಗೆ ನೀರು ಒದಗಿಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಕಳೆದ 24 ವರ್ಷಗಳಿಂದ ಬಾಗಿನ ಅರ್ಪಿಸಿಕೊಂಡು ಬರಲಾಗಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನೀರು ಹರಿಸಲಾಗುತ್ತಿದೆ ಎಂದರು.
ಹಾರಂಗಿ ನದಿ ಪಾತ್ರದಲ್ಲಿ ಹೂಳು ತೆಗೆಯಲು ಈಗಾಗಲೇ ಆರ್ಥಿಕ ಇಲಾಖೆಗೆ 135 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್ ಹಿನ್ನೆಲೆ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿರುವುದರಿಂದ ಯಾವಾಗ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ಶಾಸಕರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕುಶಾಲನಗರದ ಕಾವೇರಿ ನದಿ ಬಳಿ ಹೂಳು ತೆಗೆದಿರುವುದರಿಂದ ಈ ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ಅಪ್ಪಚ್ಚು ರಂಜನ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಬಲದಂಡೆ ನಾಲೆಗೆ 1500 ಕ್ಯುಸೆಕ್ ಮತ್ತು ಎಡದಂಡೆ ನಾಲೆಗೆ 400 ಕ್ಯುಸೆಕ್ ನೀರು ಹರಿಸುವುದಕ್ಕೆ ಶಾಸಕರು ಚಾಲನೆ ನೀಡಿದರು.
ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಆರ್.ಮಂಜುಳ, ಸದಸ್ಯರಾದ ಶ್ರೀನಿವಾಸ್, ತಾ.ಪಂ. ಸದಸ್ಯರಾದ ಗಣೇಶ್, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚರಣ್, ಪ್ರಮುಖರಾದ ಬಿ.ಬಿ.ಭಾರತೀಶ್, ತಿಮ್ಮಪ್ಪ, ಹಾರಂಗಿ ಜಲಾಶಯ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ, ಅಧೀಕ್ಷಕರಾದ ಚೆನ್ನಕೇಶವ, ಎಇಇ ಮಹೇಂದ್ರ ಕುಮಾರ್, ಎಂಜಿನಿಯರ್‍ಗಳಾದ ನಾಗರಾಜ್, ಕಿರಣ್, ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: