
ಮೈಸೂರು
ಖಾಲಿಯಿರುವ ಬೋಧಕ ಹುದ್ದೆ ಭರ್ತಿಗೆ ಅನುಮೋದನೆ ನೀಡುವಂತೆ ಸಿಎಂ ಗೆ ಮರಿತಿಬ್ಬೇಗೌಡ ಪತ್ರ
ಮೈಸೂರು,ಆ.1:- ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015ನೇ ಸಾಲಿನವರೆಗೆ ಖಾಲಿಯಿರುವ ಬೋಧಕ ಹುದ್ದೆ ಭರ್ತಿಗೆ ಅನುಮೋದನೆ ನೀಡುವಂತೆ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.
ಅವರು ಪತ್ರದಲ್ಲಿ ಈಗಾಗಲೇ ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾನುಸಾರ ಇಲಾಖಾ ನಿಯಮ ಪಾಲಿಸಿ ಆರ್ಥಿಕ ಇಲಾಖೆಯ ಅನುಮತಿ ಪಡೆದು ಅನುಮೋದನೆಗಾಗಿ ಪ್ರಸ್ತಾವನೆಯು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೋವಿಡ್ 19ನಿಂದಾಗಿ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಸೃಷ್ಟಿಯಾಗಿರುವುದರಿಂದ ಸದರಿ ಹುದ್ದೆಗಳಿಗೆ ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ಸುತ್ತೋಲೆ ಹೊರಡಿಸಿರುವುದು ದುರದೃಷ್ಟಕರ ಎಂದು ಉಲ್ಲೇಖಿಸಿದ್ದಾರೆ.
ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕೊಟ್ಟಂತಹ ಸರ್ಕಾರವೇ ಅದೇ ಹುದ್ದೆಗಳಿಗೆ ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿರುವುದು ಶೋಚನೀಯ ಎಂದಿದ್ದಾರೆ.
ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಸರ್ಕಾರದ ನಿರ್ದೇಶನದಂತೆ ಈಗಾಗಲೇ ಪರಿಪೂರ್ಣ ದಾಖಲೆಗಳೊಡನೆ ಅನುಮೋದನೆಗಾಗಿ ಬಾಕಿ ಇರುವ ಎಲ್ಲಾ ಕಡತಗಳಿಗೆ ತಕ್ಷಣವೇ ಅನುಮೋದನೆ ದೊರಕಿಸಿಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)