ಪ್ರಮುಖ ಸುದ್ದಿ

ಸಂಪುಟ ವಿಸ್ತರಣೆ ಡಿಸೆಂಬರ್ ವರಗೆ ಮಾಡದಿರಲು ಸಿಎಂ ಬಿಎಸ್ ವೈ ನಿರ್ಧಾರ : ಸಂಪುಟದಲ್ಲಿ ಮೈಸೂರು ಶಾಸಕರಿಗೆ ಸಿಗಲಿದೆಯಾ ಸ್ಥಾನ?

ರಾಜ್ಯ(ಬೆಂಗಳೂರು)ಆ.1:- ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯನ್ನು  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಡಿಸೆಂಬರ್‌ವರೆಗೆ ಮಾಡದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಲೇ ನೀವು ಸಂಪುಟ ವಿಸ್ತರಣೆ ಅಥವಾ ಪುರನ್‌ ರಚನೆ ಮಾಡಬೇಕು ಎಂದರೆ ವಲಸೆ ಬಂದ ಇಬ್ಬರಿಗೆ ಮಾತ್ರ ಅವಕಾಶ ಕೊಡಬೇಕು. ನೀವು ಅಂದುಕೊಂಡ ರೀತಿ 6 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೋದರೆ ಆಂತರಿಕ ಅಸಮಾಧಾನ ಭುಗಿಲೇಳಲಿದೆ. ಹೀಗಾಗಿ ನೀವು ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಮಾಡುವುದನ್ನು ಮುಂದೂಡಬೇಕು ಎಂದು ಪಕ್ಷದ ವರಿಷ್ಠರು ಕೊಟ್ಟ ಸಲಹೆ ಮೇರೆಗೆ ಡಿಸೆಂಬರ್‌ವರೆಗೆ ಮುಂದೂಡಲಾಗಿದೆ  ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮೈಸೂರು ಜಿಲ್ಲೆಯ ಎಸ್‌.ಎ. ರಾಮದಾಸ್‌ ಸೇರಿ ಪಕ್ಷದ ಹಿರಿಯ ಮತ್ತು ಅನುಭವಿ ನಾಯಕರಿಗೂ ಅವಕಾಶ ಕೊಡಲು ಬಿಎಸ್‌ವೈ ಒಲವು ತೋರಿದ್ದಾರೆ. ಆದರೆ  ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವುದಿಲ್ಲ ಎಂದು ಹೈಕಮಾಂಡ್‌ ಕೆಲ ಸೂಚನೆಗಳೊಂದಿಗೆ ಸಲಹೆಗಳನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ತಮ್ಮ ಆಪ್ತರ ಜತೆ ರಾತ್ರೋರಾತ್ರಿ ಸಭೆ ನಡೆಸಿ ಮುಂದೆ ಏನು ಮಾಡಲು ಸಾಧ್ಯ ಎಂಬ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡ ಪಕ್ಷದ ಎಂಎಲ್‌ಸಿಗಳಲ್ಲಿ ಕೆಲವರಿಗೆ ಮಂತ್ರಿಸ್ಥಾನ ಕೊಡಲೇಬೇಕಿದೆ. ಅಲ್ಲದೆ ಪಕ್ಷದ ನಿಷ್ಠಾವಂತ ಶಾಸಕರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿಎಸ್‌ವೈ ಸಿಲುಕಿರುವುದರಿಂದ ಒಬ್ಬರಿಗೆ ಮಂತ್ರಿಸ್ಥಾನ ಕೊಟ್ಟು ಇನ್ನೊಬ್ಬರನ್ನು ಕೈ ಬಿಟ್ಟರೆ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಳ್ಳಲಿದೆ ಎಂಬ ಭಯದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಡಿಸೆಂಬರ್‌ವರೆಗೆ ಕಾದರೆ ಕೆಲ ಅಸಮರ್ಥ ಮಂತ್ರಿಗಳನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕಬಹುದು ಎಂಬ ಲೆಕ್ಕಚಾರವನ್ನು ಹಾಕಿಕೊಂಡು ಹೈಕಮಾಂಡ್‌  ಕಾಲಾವಕಾಶ ತೆಗೆದುಕೊಳ್ಳುವಂತೆ ಹೇಳಿದ್ದು, ಇದರಿಂದ ಪಕ್ಷದಲ್ಲಿ ಮುಂದೆ ಉಂಟಾಗಲಿರುವ ಅಸಮಾಧಾನವನ್ನು ಸ್ವಲ್ಪಮಟ್ಟಿಗಾದರೂ ಶಮನಗೊಳಿಸಬಹುದು ಎಂಬ  ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಲಾಗುತ್ತಿದೆ.

ಈನಡುವೆ ಮೈಸೂರಿನಲ್ಲಿ ಪಕ್ಷದ ಶಾಸಕರಿದ್ದರೂ ಅವರಿಗೆ ಯಾವುದೇ ಉನ್ನತ ಸ್ಥಾನವನ್ನು ನೀಡದೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಬೇರೆ ಜೆಲ್ಲೆಯವರಿಗೆ ವಹಿಸಿರುವುದು ಜಿಲ್ಲೆಯ ಪಕ್ಷದ ಕಾರ್ಯಕರ್ತರ ಮತ್ತು ಸ್ವತಃ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ವೇಳೆ ಮೈಸೂರಿಗೆ ಹೆಚ್ಚಿನ ಆದ್ಯತೆ ನೀಡಿ ಅಲ್ಲಿನ ಶಾಸಕರನ್ನೇ ಮಂತ್ರಿಯಾಗಿ ಮಾಡುವ ಒಲವನ್ನೂ ಬಿಎಸ್‌ವೈ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: