ಪ್ರಮುಖ ಸುದ್ದಿ

ಮಕ್ಕಳ ಗೃಹದಲ್ಲಿ ತಂಗಿರುವ ಮಕ್ಕಳಿಗೆ ನಿರಂತರ ಕಲಿಕಾ ಮಾದರಿಯಲ್ಲಿ ಶಿಕ್ಷಕರಿಂದ ಪಾಠ

ರಾಜ್ಯ(ಮಡಿಕೇರಿ)ಆ.3:- ಕೊವಿಡ್ -19 ರ ಹಿನ್ನೆಲೆಯಲ್ಲಿ ಮನೆಗೆ ತೆರಳಲು ಅನಾನುಕೂಲವಾಗಿರುವ 11 ಮಕ್ಕಳು ಕಳೆದ 4 ತಿಂಗಳಿನಿಂದ ಮಕ್ಕಳ ಗೃಹದಲ್ಲಿ ತಂಗಿದ್ದಾರೆ. ಈ ಮಧ್ಯೆ ಶಾಲೆಗಳು ಆರಂಭವಾಗದಿದ್ದರೂ ಈ ವಸತಿ ಗೃಹದಲ್ಲಿ ಮಾತ್ರ ಕಳೆದ ಏಪ್ರಿಲ್ 15 ರಿಂದಲೂ ಮಕ್ಕಳಿಗೆ ನಿರಂತರವಾಗಿ ವಿದ್ಯಾಗಮ ನಿರಂತರ ಕಲಿಕಾ ಮಾದರಿಯಲ್ಲಿ ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ.
ಮಡಿಕೇರಿ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಪಡೆಯುತ್ತಿರುವ ಒಟ್ಟು 24 ಮಕ್ಕಳಲ್ಲಿ ಕೊವಿಡ್ ಹಿನ್ನೆಲೆಯಲ್ಲಿ ಉಂಟಾದ ಲಾಕ್ ಡೌನ್ ಸಂದರ್ಭ ವಸತಿ ಗೃಹದಲ್ಲೇ ಉಳಿದುಕೊಂಡಿರುವ 11 ಅನಾಥ ಮಕ್ಕಳು ಶಾಲಾ ಶಿಕ್ಷಣ ಮತ್ತು ಪಾಠ ಪ್ರವಚನದಿಂದ ವಂಚಿತರಾಗಬಾರದೆಂಬುದನ್ನು ಮನಗಂಡು ಮಕ್ಕಳ ಗೃಹ ಸಂಪರ್ಕಿಸಿದ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಂಪನ್ಮೂಲ ಶಿಕ್ಷಕಿ ಪುದಿಯನೆರವನ ರೇವತಿ ರಮೇಶ್ ಅವರ ಸ್ವ ಇಚ್ಛೆ ಮತ್ತು ವಿಶೇಷ ಕಾಳಜಿಯಿಂದ ಈ ಮಕ್ಕಳಿಗೆ ಕಳೆದ ಏಪ್ರಿಲ್ 15 ರಿಂದ ನಿರಂತರವಾಗಿ ಪಾಠ ಪ್ರವಚನ ಮಾಡುತ್ತಿರುವುದು ಕಂಡುಬಂದಿದೆ.
ಶಿಕ್ಷಕಿ ರೇವತಿ ರಮೇಶ್ ಅವರ ಜತೆ ನಿಲಯದ ಗೃಹ ಪಾಲಕಿ ಪಿ.ಎ.ಕವನ ಕೂಡ ಮಕ್ಕಳ ಕಲಿಕೆಗೆ ಕೈಜೋಡಿಸಿದ್ದಾರೆ.
ನಗರದ ತಮ್ಮ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳೇ ಹೆಚ್ಚಾಗಿ ನೆಲೆಸಿರುವ ಕಾವೇರಿ ಮಕ್ಕಳ ಗೃಹದಲ್ಲಿ ತಮ್ಮ ಶಾಲಾ ತರಗತಿ ಮಾದರಿಯಲ್ಲೇ ಶಿಕ್ಷಕಿ ರೇವತಿ ರಮೇಶ್, ಈ ಮಕ್ಕಳಿಗೆ ಪಠ್ಯ ಬೋಧನೆಯೊಂದಿಗೆ ನಲಿ- ಕಲಿ ಮಾದರಿಯಲ್ಲಿ ಭಾಷಾ ಬೋಧನೆಯೊಂದಿಗೆ ಗಣಿತ, ವಿಜ್ಞಾನ ಹಾಗೂ ಸಮಾಜ ಪಾಠಗಳನ್ನು ಬೋಧಿಸುತ್ತಿದ್ದಾರೆ.
ಮಕ್ಕಳಿಗೆ ಪಠ್ಯದೊಂದಿಗೆ ಅಭಿನಯ, ಹಾಡು, ನೃತ್ಯ, ಚಿತ್ರಕಲೆ, ಪರಿಸರ ಚಟುವಟಿಕೆಗಳು, ಕುಶಲ ಕಲೆ, ಕ್ರಾಫ್ಟ್, ಸಂಗೀತ ಕಲಿಸುವಲ್ಲಿ ಶಿಕ್ಷಕಿ ರೇವತಿ ರಮೇಶ್ ಮತ್ತು ಗೃಹ ಪಾಲಕಿ ಕವನ ಇವರಿಬ್ಬರೂ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಈ ನಿಲಯದ ಮಕ್ಕಳಿಗೆ ಪಾಠ ಬೋಧಿಸುತ್ತಿರುವುದು ತುಂಬಾ ಖುಷಿ ತಂದಿದೆ. ನಿಲಯದಲ್ಲಿ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಅವರಲ್ಲಿ ಪ್ರೀತಿ ವಾತ್ಸಲ್ಯ ತುಂಬಿ ಕಲಿಸುತ್ತಿರುವುದು ಮತ್ತು ಮಕ್ಕಳು ತಮ್ಮನ್ನು ಉತ್ಸಾಹದಿಂದ ಸಕ್ರಿಯವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ ಎಂದು ಶಿಕ್ಷಕಿ ರೇವತಿ ರಮೇಶ್ ತಮ್ಮ ಅಭಿಪ್ರಾಯ ಇಂಗಿತಪಡಿಸಿದರು.
ಅಪ್ಪ-ಅಮ್ಮ ಇಲ್ಲ ಎಂಬ ಕೊರಗನ್ನು ನೀಗಿಸುವ ಮೂಲಕ ಅವರನ್ನು ಸದಾ ಒಂದಿಲ್ಲೊಂದು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಆತ್ಮವಿಶ್ವಾಸ ಮೂಡಿಸಲಾಗುತ್ತಿದೆ ಎಂದು ಮಕ್ಕಳ ಗೃಹ ಪಾಲಕಿ ಪಿ.ಎ.ಕವನ ಹೇಳಿದರು. ಉಳಿದ ವೇಳೆಯಲ್ಲಿ ಈ ಮಕ್ಕಳಿಗೆ ಯೋಗಾಭ್ಯಾಸ, ಸ್ವಚ್ಛತೆ, ನೈರ್ಮಲ್ಯೀಕರಣ ಹಾಗೂ ಮನೋರಂಜನಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎಂದರು.
ಕೌಟುಂಬಿಕ ಸಮಸ್ಯೆ ಹಾಗೂ ಅವಕಾಶಗಳಿಂದ ವಂಚಿತರಾದ ಮಕ್ಕಳಿಗೆ ಶೈಕ್ಷಣಿಕ ಜ್ಞಾನ ತುಂಬುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯವೆಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಕಲ್ಮಾಡಂಡ ಮೋಹನ್ ಮೊಣ್ಣಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: