ಪ್ರಮುಖ ಸುದ್ದಿಮೈಸೂರು

ರಕ್ಷಾ ಬಂಧನದ ಸಂಭ್ರಮವನ್ನು ಕಸಿದುಕೊಂಡ ಕೊರೋನಾ ಮಹಾಮಾರಿ : ಖರೀದಿಗೆ ಮುಂದಾಗದ ಗ್ರಾಹಕರು

ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ

ಮೈಸೂರು,ಆ.3:-  ಇಂದು ಇಡೀ ದೇಶದಲ್ಲಿ ರಕ್ಷಾಬಂಧನದ ಹಬ್ಬವನ್ನು ಆಚರಿಸಲಾಗುತ್ತಿದೆ.  ರಕ್ಷಾ ಬಂಧನ ಹಿಂದೂಗಳ ಮುಖ್ಯ ಹಬ್ಬವಾಗಿದ್ದು, ಇದನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ.  ಸಹೋದರನಿಗೆ ಸಹೋದರಿಯರು ರಕ್ಷೆಯ ದಾರವನ್ನು ಅರ್ಥಾತ್ ರಾಖಿ ಕಟ್ಟಿ  ಆಚರಿಸುವ ಹಬ್ಬವಾಗಿದೆ. ಈ ಹಬ್ಬ  ಸಹೋದರ ಮತ್ತು ಸಹೋದರಿಯ ಅಚಲ ಪ್ರೀತಿಯ ಸಂಕೇತವಾಗಿದೆ. ಈ ದಿನ, ಸಹೋದರಿಯರು ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟಿ ಸುದೀರ್ಘ ಜೀವನ  ನಡೆಸುವಂತೆ ಶುಭ ಹಾರೈಸುತ್ತಾರೆ. ಹಾಗೇ ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆಯನ್ನು ನೀಡುತ್ತಾರೆ. ಇದರೊಂದಿಗೆ ಸಹೋದರಿಯರಿಗೆ ಉಡುಗೊರೆಗಳನ್ನು ಸಹ ನೀಡಲಾಗುತ್ತದೆ.

ರಕ್ಷಾಬಂಧನ ಎಂದರೆ  ರಕ್ಷೆಯ ಬಂಧನ ತಮ್ಮನ್ನು ರಕ್ಷಿಸಿಕೊಳ್ಳಲು ಯಾರನ್ನಾದರೂ ಆಶ್ರಯಿಸುವುದು. ಅದಕ್ಕಾಗಿಯೇ ರಾಖಿಯನ್ನು ಕಟ್ಟುವಾಗ ಸಹೋದರಿ   ನಾನು ನಿಮ್ಮ ಆಶ್ರಯದಲ್ಲಿದ್ದೇನೆ, ನನ್ನನ್ನು ಎಲ್ಲಾ ರೀತಿಯಲ್ಲಿ ರಕ್ಷಿಸಿ ಎನ್ನುತ್ತ ಸಹೋದರಿ ರಾಖಿ ಕಟ್ಟುತ್ತಾಳೆ.    ಸಹೋದರನ ಕೈಗೆ ರಾಖಿಯನ್ನು ಕಟ್ಟಿ ಅವನಿಗೆ ಸಿಹಿತಿಂಡಿಗಳನ್ನು ನೀಡುತ್ತಾಳೆ. ಪರಿಣಾಮವಾಗಿ, ಸಹೋದರ    ಸಹೋದರಿಗೆ ಹಣ ಅಥವಾ ಉಡುಗೊರೆಗಳನ್ನು ಸಹ ನೀಡುತ್ತಾನೆ. ರಕ್ಷಾಬಂಧನ ಎಂದರೆ ಅಮೂಲ್ಯವಾದ ಪ್ರೀತಿಯ ಬಂಧ, ಇದಕ್ಕೆ ಸಮನಾದುದು ಯಾವುದೂ ಇಲ್ಲ.

ರಾಖಿಯನ್ನು  ಶುಭ ಸಮಯದಲ್ಲಿಯೇ ಕಟ್ಟಬೇಕು.   ಪಂಚಾಂಗದ ಪ್ರಕಾರ ಅನೇಕ ಶುಭ ಯೋಗಗಳಿದ್ದು,    ಬೆಳಿಗ್ಗೆ 9 ರಿಂದ   10.22 ರವರೆಗೆ ಮತ್ತು ಮಧ್ಯಾಹ್ನ 1.40 ರಿಂದ 6.37 ರವರೆಗೆ ಮುಹೂರ್ತವಿದೆ ಎನ್ನಲಾಗಿದೆ. ಈ ಶುಭ ಸಮಯದಲ್ಲಿ ರಾಖಿಯನ್ನು ಕಟ್ಟಿದರೆ ಶುಭ ಫಲಿತಾಂಶಗಳನ್ನು ನೀಡಲಿದ್ದು, ಶುಭವಾಗಲಿದೆ ಎಂದು ನಂಬಲಾಗಿದೆ. ಕೊರೋನಾದ ನಡುವೆಯೇ ಮೈಸೂರಿನಲ್ಲಿಯೂ ರಕ್ಷಾ ಬಂಧನವನ್ನು ಸರಳವಾಗಿ ಆಚರಿಸಲಾಯಿತು.

ಈ ಬಾರಿ ಕೊರೋನಾ ಮಹಾಮಾರಿಯು ರಕ್ಷಾಬಂಧನದ ಸಂಭ್ರಮವನ್ನು ಕಸಿದುಕೊಂಡಿದ್ದು, ಮೈಸೂರು ಕೂಡ ಇದಕ್ಕೆ ಹೊರತಾಗಿಲ್ಲ.  ರಾಖಿ ಖರೀದಿ ಕೂಡ ಜೋರಾಗಿ ನಡೆದಿಲ್ಲ, ಅಂಗಡಿಗಳಲ್ಲಿ ರಾಖಿ ಖರೀದಿಸುವವರಿಲ್ಲದೆ ರಾಶಿ ರಾಶಿ ಬಿದ್ದಿದೆ. ಕಾಲೇಜು ಹುಡುಗಿಯರು ರಾಶಿ ರಾಶಿ ರಾಖಿ ಖರೀದಿಸಲು ಬರುತ್ತಿದ್ದರು. ಆದರೆ ಈ ಬಾರಿ ಕೊರೋನಾ ಮಹಾಮಾರಿಯಿಂದಾಗಿ ಶಾಲಾ ಕಾಲೇಜು ಆರಂಭವಾಗಿಲ್ಲ. ಯಾರೂ ರಾಖಿ ಖರೀದಿಸಲು ಮುಂದಾಗಿಲ್ಲ.  ದೂರದ ಊರುಗಳಲ್ಲಿರುವ ಸಹೋದರರಿಗೆ ಕೊರಿಯರ್ ಮೂಲಕವೂ ರಾಖಿ ಕಳಿಸುವವರ ಸಂಖ್ಯೆ ಕಡಿಮೆಯಾಗಿದೆ.  ಈ ಬಾರಿ ಶೇ.25ರಷ್ಟು ಮಾತ್ರವೇ ರಾಖಿ ವ್ಯಾಪಾರ ನಡೆದಿದೆ. ಕೊರಿಯರ್ ನಲ್ಲಿ ಕಳುಹಿಸಲು ಕೂಡ ಹಿಂದೇಟು ಹಾಕುತ್ತಿರುವುದು ವಹಿವಾಟು ಕುಸಿಯಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾನ್ಸಿ ಸ್ಟೋರ್ ಗಳ ಮಾಲಕರು.  ರಾಖಿಗಳು ಮಾರಾಟವಾಗದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಬಣ್ಣ ಬಣ್ದದ ದಾರಗಳಿಂದ ಸಿದ್ಧಗೊಳಿಸಿದ ಚಿತ್ತಾರಯುಕ್ತ ರಾಖಿಗಳು ಮಾರಾಟವಾಗದೆ ಮಳಿಗೆಯಲ್ಲಿಯೇ ಜೋತು ಬಿದ್ದಿವೆ. ಕೊರೋನಾ ಮಹಾಮಾರಿಯ ಎಲ್ಲ ಹಬ್ಬಗಳ ಸಂಭ್ರಮವನ್ನು ಕಸಿದುಕೊಂಡಿದೆ.

ಇಂದು ಯಜುರ್ವೇದವನ್ನು ಅನುಸರಿಸುವ ಬ್ರಾಹ್ಮಣರು ತಮ್ಮ ಜನಿವಾರವನ್ನು ಬದಲಿಸುತ್ತಾರೆ. ಪ್ರಾತಃ ಕಾಲದಲ್ಲಿಯೇ ಎದ್ದು ದೇವರಪೂಜೆಗಳನ್ನು ನೆರವೇರಿಸಿ ಹೊಸ  ಜನಿವಾರವನ್ನು ಧರಿಸುವುದು ರೂಢಿಯಲ್ಲಿದೆ.

ಯಜುರುಪಾಕರ್ಮ

ವಿಜಯನಗರದಲ್ಲಿರುವ ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿಂದು ಬೆಳಿಗ್ಗೆ 8ಗಂಟೆಗೆ ಪ್ರೊ.ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಯಜುರುಪಾಕರ್ಮ ನೆರವೇರಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: