ಪ್ರಮುಖ ಸುದ್ದಿ

ಕುಶಾಲನಗರದಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ

ರಾಜ್ಯ( ಮಡಿಕೇರಿ) ಆ.4:- ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಘಟಕ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಮಾತನಾಡಿ, ಪ್ರತಿ ಶಾಲೆಯಲ್ಲಿ ಶಿಕ್ಷಕರು ಇಕೋ ಕ್ಲಬ್ ಮೂಲಕ ಶಾಲಾ ಪರಿಸರವನ್ನು ಸ್ವಚ್ಛ, ಸುಂದರ ಹಾಗೂ ಹಸಿರು ಪರಿಸರವನ್ನಾಗಿ ರೂಪಿಸುವ ಮೂಲಕ ಮಕ್ಕಳು ಸ್ವಚ್ಛತೆ, ನೈರ್ಮಲ್ಯೀಕರಣ ಹಾಗೂ ಸ್ವಚ್ಛ ಪರಿಸರ ದಲ್ಲಿ ತೊಡಗುವಂತೆ ಅವರನ್ನು ಪ್ರೇರೇಪಿಸಬೇಕು ಎಂದರು.
ಕೋವಿಡ್ -19 ರ ಹಿನ್ನೆಲೆಯಲ್ಲಿ ಶಾಲಾ ತರಗತಿ ಮತ್ತು ಇಡೀ ಆವರಣವನ್ನು ಸ್ಯಾನಿಟೈಸ್ ಮಾಡುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡು ಮಕ್ಕಳಿಗೆ ವಿದ್ಯಾಗಮ ನಿರಂತರ ಕಲಿಕೆಯನ್ನು ಅನುಷ್ಠಾನಗೊಳಿಸಬೇಕು ಎಂದರು.
ವಿಶ್ವ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಶಾಲೆಗಳಲ್ಲಿ ಇಕೋ ಕ್ಲಬ್ ಮೂಲಕ ಕೈಗೊಳ್ಳಬೇಕಾದ ಪರಿಸರ ಕಾರ್ಯಕ್ರಮಗಳು / ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಪರಿಸರ ಪ್ರತಿಜ್ಞೆ ಬೋಧಿಸಿದ ಪ್ರೇಮಕುಮಾರ್ , ಶಿಕ್ಷಕರು ಇಕೋ ಕ್ಲಬ್ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ತಲುಪಿಸುವ ಮೂಲಕ ಸ್ವಚ್ಛ , ಹಾಗೂ ಹಸಿರು ಪರಿಸರ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ.ಧರ್ಮಪ್ಪ, ಕಾಲೇಜಿನ ಉಪ ಪ್ರಾಂಶುಪಾಲರಾದ ಬಿ.ಬಿ.ಸಾವಿತ್ರಿ, ಬಿ.ಆರ್.ಸಿ.ಶಶಿಧರ್, ಇಸಿಓ ಕೆ.ಬಿ.ರಾಧಾಕೃಷ್ಣ, ಸಂಪನ್ಮೂಲ ಶಿಕ್ಷಕರಾದ ಎಸ್.ಎನ್.ಲೋಕೇಶ್, ಸಂತೋಷ್ ಕುಮಾರ್, ಉ.ರಾ.ನಾಗೇಶ್ ಹಾಗೂ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರು, ಸಿ.ಆರ್.ಪಿ.ಗಳು ಇದ್ದರು.
ಕಾರ್ಯಕ್ರಮದ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತಂತೆ ಫಲಕಗಳನ್ನು ಹಿಡಿದು ಪರಿಸರ ಘೋಷಣೆಗಳನ್ನು ಪ್ರಚುರಪಡಿಸಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: